

ರಾಯ್ ಬರೇಲಿ: ತಮ್ಮ ಸಂಸದರ ನಿಧಿಯಲ್ಲಿ ಶೇ 70ಕ್ಕಿಂತಲೂ ಅಧಿಕ ಪ್ರಮಾಣವನ್ನು ಅಲ್ಪಸಂಖ್ಯಾತರಿಗೆ ವ್ಯಯಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಯ್ ಬರೇಲಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಗಾಂಧಿ ಕುಟುಂಬವು ಸುಳ್ಳು ಹೇಳುವುದರಲ್ಲಿ ನಿಪುಣರು ಎಂದ ಗೃಹ ಸಚಿವರು ಈ ಕ್ಷೇತ್ರದಿಂದ ಕುಟುಂಬಕ್ಕೆ ಹಲವು ವರ್ಷಗಳಿಂದ ಅವಕಾಶ ನೀಡಿದ್ದೀರಿ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಕಾಂಗ್ರೆಸ್ಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ ಅವರು, ರಾಯ್ ಬರೇಲಿಯನ್ನು ಮೋದಿ ಅವರ ಅಭಿವೃದ್ಧಿ ಪಯಣದಲ್ಲಿ ಸೇರಿಸುತ್ತೇವೆ ಎಂದು ಭರವಸೆ ನೀಡಿದರು. ರಾಯ್ಬರೇಲಿ ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮೇ 20 ರಂದು ಮತದಾನ ನಡೆಯಲಿದೆ.
ಪ್ರತಾಪ್‌ಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ಅವರು, ರಾಹುಲ್ ಗಾಂಧಿ ಪಾಕಿಸ್ತಾನದ "ಅಣುಬಾಂಬ್"ಗೆ ಹೆದರಬಹುದು ಆದರೆ ಬಿಜೆಪಿ ಅಲ್ಲ, ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು ಮತ್ತು "ನಾವು ಅದನ್ನು ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ.