ಈ ಪರಿ ಗದ್ದಲ-ಗೊಂದಲದ ನಡುವೆಯೂ ಲಂಚದತ್ತ ಕೆಎಸ್‌ಆರ್‌ಟಿಸಿ ಅಧಿಕಾರಿ ಗಮನ!

ksrtc bus
Published on

ವಿಜಯಪುರ: ಕರೊನಾ ಲಾಕ್‌ಡೌನ್ ಭಾಗಶಃ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಈಗ ಎಲ್ಲ ಬಸ್ ನಿಲ್ದಾಣಗಳಲ್ಲಿ ಜನರ ಗದ್ದಲ ಕಂಡುಬರುತ್ತಿದೆ. ಸುಮಾರು 2 ತಿಂಗಳ ಬಳಿಕ ಸೇವೆ ಆರಂಭಿಸಿರುವುದರಿಂದ ಮತ್ತು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕಿರುವುದರಿಂದ ಕೆಎಸ್‌ಆರ್‌ಟಿಸಿ ಅಧಿಕಾರಿಗಳಲ್ಲೂ ಸಾಕಷ್ಟು ಗೊಂದಲ ಮನೆ ಮಾಡಿದೆ.

ಆದರೆ ಇಂತಹ ಗದ್ದಲ-ಗೊಂದಲದಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುವ ಅಧಿಕಾರಿಗಳೂ ಇರುತ್ತಾರೆ ಎನ್ನುವುದಕ್ಕೆ ವಿಜಯಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ.

ಸಾರಿಗೆ ನಿಯಂತ್ರಣಾಧಿಕಾರಿ ಪುಂಡಪ್ಪ ರೆಡ್ಡಿ ಎಂಬವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಸಹಾಯಕ ಸಂಚಾರಿ ವ್ಯವಸ್ಥಾಪಕ ರಾಜಶೇಖರ ಗಜಾಕೋಶ ಅವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಕೇಬಲ್ ಕಾಮಗಾರಿಯೊಂದಕ್ಕೆ ಅನುಮತಿ ನೀಡಿದ್ದ ಪುಂಡಪ್ಪ ಮೇಲೆ ದೋಷಾರೋಪ ರಿಪೋರ್ಟ್ ಹಾಕುವ ಅಧಿಕಾರ ರಾಜಶೇಖರ ಅವರ ಕೈಯಲ್ಲಿತ್ತು. ರಿಪೋರ್ಟ್ ಹಾಕದಿರಲು 20 ಸಾವಿರ ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು.

ಅದಲ್ಲದೆ ಬೇಗ ಹಣ ಕೊಡುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತಿದ್ದ ಪುಂಡಪ್ಪ ಎಸಿಬಿಗೆ ದೂರು ನೀಡಿದ್ದರು. ಇಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ರಾಜಶೇಖರ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.

ಎಸಿಬಿ ಡಿವೈಎಸ್‌ಪಿ ವೇಣುಗೋಪಾಲ, ಸಿಪಿಐ ಎಸ್‌ಆರ್ ಗಣಾಚಾರಿ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net