

ತಮಿಳುನಾಡು: ತಮಿಳುನಾಡಿನ ಈಶಾನ್ಯ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕೊಯಮತ್ತೂರು, ತಿರುಪ್ಪೂರ್, ಮಧುರೈ, ಥೇಣಿ, ದಿನಿಡಿಗಲ್ ಸೇರಿದಂತೆ ಐದು ಜಿಲ್ಲೆಗಳು ಮತ್ತು ನೀಲಗಿರಿಯ ಕೆಲವು ತಾಲೂಕುಗಳಲ್ಲಿ ಗುರುವಾರ (ನ.9) ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನೀಲಗಿರಿ ಜಿಲ್ಲೆಯ ಕೋಟಗಿರಿ-ಮೆಟ್ಟುಪಾಳ್ಯಂ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಘಟನೆಯ ಬೆನ್ನಲ್ಲೇ ವಾಹನ ಸವಾರರಿಗೆ ಇದೀಗ ಬದಲಿ ಮಾರ್ಗವನ್ನು ನೀಡಲಾಗಿದೆ.
ಈ ಮಧ್ಯೆ ಭಾರೀ ಮಳೆಯಿಂದಾಗಿ ಕಲ್ಲರ್ ಮತ್ತು ಅಡ್ಡೆರ್ಲಿ ನಡುವೆ ಹಳಿ ಅಡಿಯಲ್ಲಿ ಮಣ್ಣು ಕೊಚ್ಚಿಹೋಗಿದ್ದರಿಂದ ನೀಲಗಿರಿ ಪರ್ವತ ರೈಲ್ವೆ ವಿಭಾಗದಲ್ಲಿ ಎರಡು ರೈಲುಗಳನ್ನು ಸದ್ಯ ರದ್ದುಗೊಳಿಸಲಾಗಿದೆ. ಮಧುರೈನ ಹಲವು ಭಾಗಗಳು ಜಲಾವೃತಗೊಂಡಿದ್ದು, ಗುರುವಾರ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿರಂತರ ಮಳೆಯಾಗಿದ್ದು, ಕಣ್ಣೂರು ಜಿಲ್ಲೆಯಲ್ಲಿ ಬುಧವಾರ (ನ.8) 7 ಸೆಂ.ಮೀ ಮಳೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ವರದಿ ಅನುಸಾರ, ಕೇರಳದಲ್ಲಿ ಮುಂದಿನ ಎರಡು ದಿನಗಳವರೆಗೆ ವ್ಯಾಪಕ ಮಳೆಯಾಗಲಿದೆ. ಅದೇ ಅವಧಿಯಲ್ಲಿ ತಮಿಳುನಾಡು ಕೂಡ ಸಾಕಷ್ಟು ಪ್ರಮಾಣದಲ್ಲಿ ಮಳೆ ದಾಖಲಿಸಲಿದೆ ಎಂದು ಹೇಳಿದೆ,(ಏಜೆನ್ಸೀಸ್).