

ಬೆಂಗಳೂರು: ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಜುಲೈ 16ಕ್ಕೆ ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಟೀಸರ್ ಮೂಲಕವೇ ವಿಶ್ವದಾಖಲೆ ಬರೆದ ಈ ಸಿನಿಮಾ, ಅಭಿಮಾನಿ ವಲಯದಲ್ಲಿಯೂ ಅಷ್ಟೇ ಕುತೂಹಲ ಮೂಡಿಸಿದೆ. ಇದೀಗ ಇದೇ ಸಿನಿಮಾಕ್ಕೆ ಅಮೆರಿಕಾದ ಕುಸ್ತಿಪಟು ದೊಡ್ಡ ಅಭಿಮಾನಿಯಾಗಿದ್ದಾರೆ! ಆ ಚಿತ್ರದ ಬಿಡುಗಡೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಅಮೆರಿಕದ ಖ್ಯಾತ ಕುಸ್ತಿಪಟು ವಿಲ್ಲಿ ಮ್ಯಾಕ್ ಸೋಷಿಯಲ್ ಮೀಡಿಯಾದಲ್ಲಿ ‘ಕೆಜಿಎಫ್ - ಚಾಪ್ಟರ್ 2’ ಚಿತ್ರವನ್ನು ನೋಡಲು ಕಾಯುತ್ತಿರುವ ಬಗ್ಗೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ‘ಕೆಜಿಎಫ್’ನ ಮೊದಲ ಭಾಗ ನೋಡಿರುವ ವಿಲ್ಲಿ, ಎರಡನೇ ಭಾಗವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಟೀಸರ್ ಯಶ್ ಜನ್ಮದಿನದ ಪ್ರಯುಕ್ತ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿತ್ತು. ರಿಲೀಸ್ ಆದ 24 ಗಂಟೆಯಲ್ಲಿ ಅತೀ ಹೆಚ್ಚು ವೀಕ್ಷಣೆ (7ಕೋಟಿ 80 ಲಕ್ಷ) ಕಂಡ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಇಲ್ಲಿಯವರೆಗೂ 17 ಕೋಟಿ ವೀಕ್ಷಣೆ ಕಂಡಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ಚಿತ್ರ ಸಿದ್ಧವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ.