

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ಹಾಗೂ ಆಗಮಿಸುವ ಎಲ್ಲ ವಿಮಾನಗಳ ಸಂಚಾರವನ್ನು ಸೋಮವಾರ ಹಾಗೂ ಮಂಗಳವಾರ ರದ್ದುಗೊಳಿಸಲಾಗಿದೆ.
ಕತಾರ್ ಹಾಗೂ ಇರಾಕ್ ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಆರಂಭಿಸಿದ ಬೆನ್ನಲ್ಲೇ ಕತಾರ್, ಬಹರೈನ್, ಯುಎಇ, ಇರಾಕ್ ಮತ್ತು ಕುವೈತ್ ದೇಶಗಳು ತಮ್ಮ ವಾಯು ಮಾರ್ಗವನ್ನು ಇತರ ರಾಷ್ಟ್ರಗಳ ವಿಮಾನ ಸಂಚಾರಕ್ಕೆ ಮುಚ್ಚಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ.
ಸೋಮವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿ ಹಾಗೂ ದಮ್ಮಾಮ್‌ಗೆ ತೆರಳಿದ ಒಟ್ಟು ಎರಡು ವಿಮಾನಗಳು ಉದ್ದೇಶಿತ ನಿಲ್ದಾಣ ತಲುಪದೆ ಮಂಗಳೂರಿಗೆ ವಾಪಾಸ್ ಆಗಿವೆ.
ವಾಯುಪ್ರದೇಶವನ್ನು ಸೋಮವಾರ ತಡರಾತ್ರಿ ಅನಿರೀಕ್ಷಿತವಾಗಿ ಮುಚ್ಚಿರುವುದು ಆಗಲೇ ಪ್ರಯಾಣ ಕಾರ್ಯಕ್ರಮ ರೂಪಿಸಿದ್ದ ಪ್ರಯಾಣಿಕರು ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಸಮಸ್ಯೆ ತಂದೊಡ್ಡಿತು. ಸೋಮವಾರ ಸುಮಾರು ರಾತ್ರಿ 9.40 ಕ್ಕೆ 172 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಯೊಂದಿಗೆ ಅಬುಧಾಬಿಗೆ ಹೊರಟಿದ್ದ ಇಂಡಿಗೋ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ವಿಮಾನವು ತಡರಾತ್ರಿ ಸುಮಾರು 2.40 ಕ್ಕೆ ಮಂಗಳೂರಿಗೆ ಮರಳಿತು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಪಹಾರ ನೀಡಲಾಯಿತು ಮತ್ತು ಪೂರ್ಣ ಮರುಪಾವತಿಯ ಬಗ್ಗೆ ತಿಳಿಸಲಾಯಿತು.
ಮಂಗಳೂರಿನಿಂದ ದಮ್ಮಾಮ್‌ಗೆ ಸೋಮವಾರ ಸಂಜೆ 6.49 ಕ್ಕೆ ತೆರಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಸ್ಕತ್‌ಗೆ ತಿರುಗಿಸಲಾಯಿತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ರಾತ್ರಿ 10.29 ಕ್ಕೆ ಮಸ್ಕತ್‌ನಲ್ಲಿ ಇಳಿಯಿತು. ಮುಂದಿನ ಸೂಚನೆ ಬರುವವರೆಗೆ ಗಲ್ಫ್ ದೇಶಗಳಿಗೆ ವಿಮಾನ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲ ತಿಳಿಸಿದೆ. ಅಬುಧಾಬಿ, ದಮ್ಮಾಮ್ ಮತ್ತು ದುಬೈಗೆ ಮತ್ತು ಅಲ್ಲಿಂದ ಹೊರಡಲು ನಿಗದಿಪಡಿಸಲಾದ ವಿಮಾನಗಳನ್ನು ಮಂಗಳವಾರವೂ ರದ್ದುಗೊಳಿಸಲಾಯಿತು.