

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಗ್ರಾಮ ಪ್ರದೇಶದಿಂದ 108ಗೆ ಕರೆ ನೀಡಿದರೆ ತಕ್ಷಣ ಸ್ಪಂದನೆ ಸಿಗುವುದಿಲ್ಲ. ಈ ಬಗ್ಗೆ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪಂಚಾಯಿತಿ ವತಿಯಿಂದ ಒಂದು ಆಂಬುಲೆನ್ಸ್ ಬಗ್ಗೆ ಯೋಜನೆ ರೂಪಿಸುವುದು ಅಗತ್ಯ ಎಂದು ಗ್ರಾಮಸ್ಥರು ಹೇಳಿದರು.
ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪ್ರಥಮ ಹಂತದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು.
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಆಂಬುಲೆನ್ಸ್(108) ಇದ್ದರೂ ಅಗತ್ಯ ಸಂದರ್ಭಗಳಲ್ಲಿ ಡ್ರೈವರ್ ಇಲ್ಲ ಎಂಬ ಸಬೂಬು ನೀಡಲಾಗುತ್ತಿದೆ. ಒತ್ತಾಯ ಮಾಡಿದಾಗ ಮುಕ್ಕಾಲು ಗಂಟೆ ಕಾಯಿಸಿ ಮಂಗಳೂರು ವೆನ್ಲಾಕ್ನಿಂದ ತರಿಸಲಾಯಿತು ಎಂದು ದೀಕ್ಷಿತ್ ಕಕ್ವ ತಿಳಿಸಿದರು. ಅದಕ್ಕೆ ದನಿಗೂಡಿಸಿದ ವಕೀಲ ರವೀಶ್ ಕಾಮತ್, ಅಪಘಾತಗಳು ಹೇಳಿ ಸಂಭವಿಸುವುದಿಲ್ಲ. ಅಗತ್ಯ ಸಂದರ್ಭಕ್ಕಿಲ್ಲದ ಸೇವೆ ಯಾಕೆ? ಎಂದು ಪ್ರಶ್ನಿಸಿದರು.
ಮೆಸ್ಕಾಂ ಸಿಬ್ಬಂದಿ ತಾರತಮ್ಯ ಧೋರಣೆ ಮಾಡುತ್ತಿದ್ದಾರೆ. ಸ್ಥಳೀಯರು ಅರ್ಜಿ ನೀಡಲು ಹೋದಾಗ ನಿರಾಕರಿಸುವ ಅವರು ಪ್ರಭಾವಿಗಳಿಗೆ ಮಣೆ ಹಾಕುತ್ತಿದ್ದಾರೆ ಎಂದು ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು. ಸಾಧು ಪೂಜಾರಿ ಮಟ್ಟು ಮಾತನಾಡಿ, ಮಟ್ಟು ಹಾಗೂ ಮಾನಂಪಾಡಿ ಗ್ರಾಮದಲ್ಲಿ ವಿದ್ಯುತ್ ವೈರ್ಗಳ ಮೇಲೆ ಮರದ ಗೆಲ್ಲುಗಳು, ತೆಂಗಿನ ಸೋಗೆ ತಾಗುವ ಕಾರಣ ವಿದ್ಯುತ್ ಕಡಿತದ ಜತೆಗೆ ಜೀವಾಪಾಯವಿದೆ. ಮರಗಳ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿ ಕೊಂಬೆ ಕಡಿಯುವ ಬಗ್ಗೆ ಯೋಜನೆ ರೂಪಿಸಬೇಕು ಎಂದರು.
ಶಿಕ್ಷಕ ಶಿವಪ್ರಸಾದ್, ಬಹಳ ಸಮಯದಿಂದ ಶಾಲೆ ಬಳಿಯ ವಿದ್ಯುತ್ ವೈರ್ ಸಮಸ್ಯೆ ಬಗ್ಗೆ ಮೆಸ್ಕಾಂಗೆ ಮನವಿ ನೀಡಿ ಸಾಕಾಗಿದೆ. ಮಕ್ಕಳು ಓಡಾಡುವ ಸ್ಥಳವಾದ ಕಾರಣ ಪ್ರಾಣಾಪಾಯ ಸಂಭವಿಸಿದರೆ ಹೊಣೆ ಯಾರು? ಎಂದರು. ಮೆಸ್ಕಾಂ ಅಧಿಕಾರಿ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಕೊಲಕಾಡಿ ಬಳಿ ಐದು ಮನೆಗಳಿಗೆ ಸುಮಾರು 15 ದಿನಗಳಿಂದ ಕರೆಂಟ್ ಇಲ್ಲ. ಲೈನ್ಮನ್ಗಳು ಬಂದು ಹೋಗುತ್ತಾರೆ. ಆದರೆ ಕರೆಂಟ್ ಇಲ್ಲದೆ ನಾವು ಹೈರಾಣಾಗಿದ್ದೇವೆ ಎಂದು ಸ್ಥಳೀಯ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಕಕ್ವ ಶ್ರೀ ಜಾರಂದಾಯ ದೈವಸ್ಥಾನ ರಸ್ತೆಯಲ್ಲಿ ವಿದ್ಯುತ್ ದೀಪ ಇಲ್ಲದೆ ಸಮಸ್ಯೆಯಾಗುತ್ತಿದೆ. ಮಳೆಗಾಲದಲ್ಲಿ ನೆರೆ ಸಮಸ್ಯೆ ಇರುವ ಕಾರಣ ವಿಷಜಂತುಗಳು ರಸ್ತೆಯಲ್ಲಿ ಹರಿದಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದರು.
ಕೃಷಿ ಅಧಿಕಾರಿ ಷಣ್ಮುಗ ಕೆ.ಟಿ, ಅತಿಕಾರಿಬೆಟ್ಟು ಮತ್ತು ಶಿಮಂತೂರು ಗ್ರಾಮ ವ್ಯಾಪ್ತಿಯಲ್ಲಿ ಒಂದು ಎಕರೆಗೂ ಅಧಿಕ ಕೃಷಿ ಭೂಮಿಯುಳ್ಳ 125 ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿ ಅವಕಾಶವಿದೆ. ಕೃಷಿಗಾಗಿ ಜೀವನಾಮೃತ ತಯಾರಿ, ಎರೆ ಗೊಬ್ಬರ ತಯಾರಿ ಬಗ್ಗೆ ತರಬೇತಿ ನೀಡಲಾಗುವುದು ಹಾಗೂ ಪ್ರೋತ್ಸಾಹಧನ ಲಭ್ಯವಿದೆ ಎಂದರು.
ಪೊಲೀಸ್ ಉಪನಿರೀಕ್ಷಕಿ ಅನಿತಾ ಎಚ್.ಬಿ., ನೋಡಲ್ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ. ಮಾತನಾಡಿದರು. ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಕೃತಜ್ಞತೆ ಸಲ್ಲಿಸಿದರು. ಪಿಡಿಒ ಶೈಲಜ ವಂದಿಸಿದರು.
ಕುಡಿಯುವ ನೀರು ಯೋಜನೆಯಿಂದ ರಸ್ತೆ ಹಾಳು
ಅಮೃತ್ 2.0 ಯೋಜನೆಗಾಗಿ ಎಳತ್ತೂರು ಬಳಿ ಅಗೆದು ಹಾಕಿ ರಸ್ತೆ ಚರಂಡಿಯಂತಾಯಾಗಿದೆ. ಅತಿಕಾರಿಬೆಟ್ಟು ರಸ್ತೆ ಕೂಡ ಹಾಳಾಗಿದೆ ಎಂದು ಗ್ರಾಮಸ್ಥ ಪುನೀತಕೃಷ್ಣ ಹೇಳಿದರು. ರವೀಶ್ ಕಾಮತ್, ಯುವಜನತೆಗೆ ಉದ್ಯೋಗ ಮಾಹಿತಿ ಸಹಿತ ಸ್ಕಿಲ್ ಡೆವಲಪ್ಮೆಂಟ್ ತರಬೇತಿ ಅಗತ್ಯವಿದೆ. ಕೃಷಿ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಪಂಚಾಯಿತಿ ವಿಶೇಷ ಯೋಜನೆ ರೂಪಿಸಬೇಕು ಎಂದರು. ಕೃಷಿ ಕ್ರೀಡೆಗಳ ಉತ್ತೇಜನಕ್ಕೆ ಶೇ.2 ಅನುದಾನವಿದೆ. ಆಸಕ್ತರು ಪಡೆದುಕೊಳ್ಳಬಹುದು ಎಂದು ಪಿಡಿಒ ಶೈಲಜ ಉತ್ತರಿಸಿದರು.
11ಬಿ, 9-11 ಸರಳವಾಗಲಿ
ಜನಸಾಮಾನ್ಯರನ್ನು ಹೈರಾಣಗೊಳಿಸುತ್ತಿರುವ 11ಬಿ, 9-11ಗಳನ್ನು ಸರ್ಕಾರ ಸರಳೀಕರಣಗೊಳಿಸಬೇಕು. ಪಂಚಾಯಿತಿಯಲ್ಲಿ ಕೇವಲ ಒಂದು ಸಾವಿರ ರೂ.ನಲ್ಲಿ ಆಗುವ ಕೆಲಸ, ಮಧ್ಯವರ್ತಿ ಹಾಗೂ ಅಧಿಕಾರಿಗಳ ಕಾಟದಿಂದ 50 ಸಾವಿರ ರೂ.ವರೆಗೆ ಹೋಗಿದೆ. ಹೊಸ ಮನೆಗೆ ಡೋರ್ ನಂ. ನೀಡಲು ಜನರು ಕಾರ್ಮಿಕ ಇಲಾಖೆಗೆ ಅಲೆದಾಡಬೇಕಾಗಿದೆ. ಅಲ್ಲಿಯೂ ಅಧಿಕಾರಿಗಳು ಜನರನ್ನು ಹೈರಾಣಗೊಳಿಸುತ್ತಾರೆ. 1 ಲಕ್ಷಕ್ಕೆ 1 ಸಾವಿರ ರೂ.ನಂತೆ ಫೀಸ್ ಪಡೆದರೂ ಹಲವು ಬಾರಿ ಸತಾಯಿಸುತ್ತಾರೆ. ಅವರು ವಾರಕ್ಕೆ ಒಂದು ದಿನ ಒಂದು ಪಂಚಾಯಿತಿಗೆ ಹೋಗಿ ಸ್ಥಳ ಪರಿಶೀಲನೆ ನಡೆಸಿ ಫೀಸ್ ನಿರ್ಣಯಿಸಿದರೆ ಸಮಸ್ಯೆ ಸರಿಯಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಈ ಬಗ್ಗೆ ನೋಡಲ್ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಹೇಳಿದರು.