

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ಗುರುವಾರ ಸಾಯಂಕಾಲ ಕಿಲೋಮೀಟರ್ ಉದ್ದದಲ್ಲಿ ಟ್ರಾಫಿಕ್ ಜಾಂ ಉಂಟಾದ ಪರಿಣಾಮ ಸುಮಾರು ಎರಡು ತಾಸು ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಈವೇಳೆ ತುರ್ತು ಸೇವೆಯಲ್ಲಿದ್ದ 2 ಆಂಬ್ಯಲೆನ್ಸ್ ವಾಹನ ಸಂಚಾರಕ್ಕಾಗಿ ಪರದಾಡಿದ ಘಟನೆಯೂ ನಡೆಯಿತು.
ಒಂದಡೆ ಕೂಳೂರು ಸೇತುವೆ ಬಳಿ ಕಳೆದ ವರ್ಷ ಒಡೆದು ಹೋಗಿದ್ದ ಕುಡಿಯುವ ನೀರಿನ ಕೊಳವೆ ಸರಿಪಡಿಸಲು ತೆಗೆದ ಗುಂಡಿಯನ್ನು ತಾತ್ಕಾಲಿಕವಾಗಿ ಜಲ್ಲಿ ಕಲ್ಲು ಹಾಗೂ ಸಿಮೆಂಟ್ ಹುಡಿ ಹಾಕಿ ಸರಿಪಡಿಸಲಾಗಿತ್ತು. ಬೇಸಗೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಈಗ ಸುರಿಯುತ್ತಿರುವ ಮಳೆಯಿಂದಾಗಿ ಅದರ ಮೇಲೆ ನಿರಂತರವಾಗಿ ವಾಹನಗಳು ಸಂಚರಿಸಿದ ಪರಿಣಾಮ ಒಳಗಿನಿಂದ ಮಣ್ಣು ಜಗ್ಗಿದೆ. ಪರಿಣಾಮ ಹೊಂಡ ಬಿದ್ದಿದೆ. ಇದರಿಂದಾಗಿ ವಾಹನಗಳು ಸರಾಗವಾಗಿ ಸಂಚರಿಸಲಾಗದೆ ದಟ್ಟಣೆ ಉಂಟಾಗುತ್ತಿದೆ. ಮತ್ತೋದಡೆ ಕೂಳೂರು ಸೇತುವೆಯ ಬಳಿಯಲ್ಲೇ ಗುರುವಾರದ ವೇಳೆ ಬೃಹತ್ ಹೊಂಡ ನಿರ್ಮಾಗೊಂಡಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ಒಂದೇ ಪಥದಲ್ಲಿ ಸಂಚಾರಿಸುವಂತಾಗಿದೆ.
*ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಪೂರ್ಣ ನಿರ್ಲಕ್ಷೃ
ಸಂಜೆಯ ವೇಳೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಕಿಲೋ ಮೀಟರ್ ತನಕ ಉದ್ದದ ಸಾಲು ಕಂಡು ಬರುತ್ತಿದೆ. ಗುರುವಾರ ರಾತ್ರಿ ವರೆಗೂ ಕೊಟ್ಟಾರದ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತುರ್ತು ಪ್ರಯಾಣ ಮಾಡುವವರು ಇದರಿಂದ ತೊಂದರೆಗೊಳಗಾದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಪೂರ್ಣ ನಿರ್ಲಕ್ಷೃ ವಹಿಸಿದೆ. ಕೂಳೂರು, ನಂತೂರು, ಕೆಪಿಟಿ ಮೊದಲಾದ ಕಡೆ ರಾಷ್ಟ್ರೀಯ ಹೆದ್ದಾರಿ ಮಳೆಗೆ ಹದಗೆಡುತ್ತಿರುವುದು ಸಾಮಾನ್ಯ. ಈ ಬಗ್ಗೆ ಅಧಿಕಾರಿಗಳ ಗಮನದಲ್ಲಿದ್ದರೂ ಸರಿಪಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳಾಗುತ್ತಿಲ್ಲ. ಅಧಿಕಾರಿಗಳ ಮೂಲಕ ಕೆಲಸ ಮಾಡಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿದ್ದಾರೆ.
---------------
ಪತ್ರಕರ್ತರೆ ಸರಿಪಡಿಸಿ- ನಮ್ಮಿಂದ ಸಾಧ್ಯವಿಲ್ಲ!
ಕೂಳೂರು ಬಳಿ ಹೆದ್ದಾರಿ ಅವ್ಯವಸ್ಥೆಯಾಗಿರುವ ಬಗ್ಗೆ ವಿಜಯವಾಣಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಪ್ರಾಧಿಕಾರದ ಅಧಿಕಾರಿಗಳಿಂದ ವ್ಯತಿರಿಕ್ತವಾದ ಉತ್ತರ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ನಮ್ಮ ಅಧಿಕಾರಿಗಳಾಗಲಿ ಕಾರಣ ಅಲ್ಲ, ಮಳೆಯಿಂದಾಗಿ ಇಂತಹ ಸಂಸ್ಯೆ ಎದುರಾಗಿದೆ. ಸಾಧ್ಯವಿದ್ದರೆ ಮಂಗಳೂರಿನ ಪತ್ರಕರ್ತರು ಈ ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲಿ ಎಂದು ಉತ್ತರ ನೀಡಿ ಪೋನ್ ಕರೆ ಸ್ಥಗಿತಗೊಳಿಸಿದರು.