

ರಾಣೆಬೆನ್ನೂರ: ನಗರದ ಯಾವುದಾದರೂ ಒಂದು ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಇಲ್ಲಿಯ ಸರ್ವ ಜನಾಂಗ ಅಭಿವೃದ್ಧಿ ವೇದಿಕೆ ವತಿಯಿಂದ ಬುಧವಾರ ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರಗೆ ಮನವಿ ಸಲ್ಲಿಸಲಾಯಿತು.
ವೇದಿಕೆ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಉತ್ತರ ಕರ್ನಾಟಕದ ಹೆಬ್ಬಾಗಿಲು, ವಾಣಿಜ್ಯ ನಗರ ಎಂದು ಪ್ರಖ್ಯಾತವಾದ ರಾಣೆಬೆನ್ನೂರ ನಗರದಲ್ಲಿ ಒಬ್ಬ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಇಲ್ಲದಿರುವುದು ಖಂಡನೀಯ. ನಗರದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವ ಸಲುವಾಗಿ ಈ ಹಿಂದೆ ನಗರಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಪ್ರತಿಮೆ ಮಾಡಲು ಹಣ ತುಂಬಲಾಗಿದ್ದು, ಅಲ್ಲದೆ ಪ್ರತಿಮೆ ತಯಾರಾಗಿದೆ. ಆದರೆ, ಅದನ್ನು ಇನ್ನೂ ರಾಣೆಬೆನ್ನೂರ ನಗರಕ್ಕೆ ತಂದು ಪ್ರತಿಷ್ಠಾಪಿಸಿರುವುದಿಲ್ಲ. ಆದ್ದರಿಂದ ಈಗಿರುವ ನಗರಸಭೆಯ ಪ್ರತಿನಿಧಿಗಳು ಮತ್ತು ಶಾಸಕರು ಒಟ್ಟಾಗಿ ಸೇರಿ ಡಾ. ಬಿ.ಆರ್. ಅಂಬೇಡ್ಕರ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಮುಂದಾಗಬೇಕು.
ಇಲ್ಲವಾದರೆ ಮುಂದಿನ ದಿನದಲ್ಲಿ ನಗರಸಭೆ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಕರಬಸಪ್ಪ ದಾಸಪ್ಪನವರ, ಕೆ.ಆರ್. ಉಮೇಶ, ಸಂತೋಷ ವರವಜ್ಜಿ, ನವೀನ ಮೆಣಸಿನಹಾಳ, ಮಲ್ಲೇಶ ನಿಂಗಣ್ಣನವರ, ನಿಖಿತ ಮೆಣಸಿನಹಾಳ ಮತ್ತಿತರರು ಉಪಸ್ಥಿತರಿದ್ದರು.