ಅಂಬೇಡ್ಕರ್ ಭಾರತದ ಭಾಗ್ಯವಿಧಾತ: ಜ್ಞಾನಪ್ರಕಾಶ ಸ್ವಾಮೀಜಿ

udp-23-dasamsa
Published on

ಉಡುಪಿ: ಭಾರತದ ಭವಿಷ್ಯ ಬರೆದ ನಾಯಕ ಅಂಬೇಡ್ಕರ್ ನೈಜಾರ್ಥದಲ್ಲಿ ಭಾರತ ಭಾಗ್ಯವಿಧಾತರಾಗಿದ್ದಾರೆ. ಆದರೆ ಕೆಲವು ಸೀಸನಲ್ ಹಾಗೂ ನಕಲಿ ಅಂಬೇಡ್ಕರ್‌ವಾದಿಗಳಿಂದ ದೇಶಕ್ಕೆ ಗಂಡಾಂತರ ಎದುರಾಗಿದೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

ಭಾನುವಾರ ಉಡುಪಿಯಲ್ಲಿ ದಸಂಸ ಐಕ್ಯ ಹೋರಾಟ ಸಮಿತಿ ಆಶ್ರಯದಲ್ಲಿ ನಡೆದ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆ ಉದ್ಘಾಟಿಸಿ, ಅವರು ಪ್ರಧಾನ ಭಾಷಣ ಮಾಡಿದರು.

ಅಂಬೇಡ್ಕರ್ ಅವರು ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಕಲ್ಪಿಸುವ ಮೂಲಕ ದೀನ-ದಲಿತರು, ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಮತ ಸ್ವಂತ ಮಗಳು ಇದ್ದಂತೆ. ಹೀಗಾಗಿ ಹೆಂಡ, ಹಣಕ್ಕೆ ಮತವನ್ನು ಮಾರಿಕೊಳ್ಳಬಾರದು. ಮತವನ್ನು ಮಾರಿಕೊಂಡರೆ ಅಂಬೇಡ್ಕರ್‌ಗೆ ದ್ರೋಹ ಬಗೆದಂತಾಗುತ್ತದೆ. ಆದ್ದರಿಂದ ಶೋಷಿತ ಸಮುದಾಯದ ಹಿತವನ್ನು ಯಾರು ಕಾಯುತ್ತಾರೆ ಅವರಿಗೆ ಕೊಡಬೇಕು. ಕಳೆದ ೭೫ ವರ್ಷಗಳಿಂದ ಬೀದಿ ಬೀದಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿಲ್ಲಿಸಿದ್ದೇವೆ. ನಾವೂ ಬೀದಿಯಲ್ಲಿ ನಿಂತಿದ್ದೇವೆ. ಅದರ ಬದಲು ದಲಿತರಿಗೆ ಬೇಕಾಗಿರುವುದು ವೈಚಾರಿಕತೆ. ಅದನ್ನು ಬೆಳೆಸಿಕೊಳ್ಳಬೇಕು ಎಂದರು.

ದಸಂಸ ಐಕ್ಯ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಅಧ್ಯಕ್ಷತೆ ವಹಿಸಿದ್ದರು. ಬೀದರ್ ಅಣದೂರು ಧಮ್ಮದರ್ಶನ ಭೂಮಿ ಭಂತೇ ವರಜ್ಯೋತಿ, ಕರ್ನಾಟಕ ಜನಶಕ್ತಿ ಸಮಿತಿಯ ಮಲ್ಲಿಗೆ ಸಿರಿಮನೆ, ಮೈಸೂರು ಮುಕ್ತ ವಿವಿ ಉಪನಿರ್ದೇಶಕ ಡಾ.ಕೆ.ಪಿ. ಮಹಾಲಿಂಗು, ಮುಸ್ಲಿಂ ಒಕ್ಕೂಟ ಅಧ್ಯಕ್ಷ ಯಾಸಿನ್ ಮಲ್ಪೆ, ಬೌದ್ಧ ಮಹಾಸಭಾ ಅಧ್ಯಕ್ಷ ರಾಘವೇಂದ್ರ, ಉಪನ್ಯಾಸಕ ಪ್ರೊ.ಫಣಿರಾಜ್, ಸಂಚಾಲಕ ಜಯನ್ ಮಲ್ಪೆ, ಸುಂದರ್ ಮಾಸ್ತರ್, ಶ್ಯಾಮರಾಜ ಭಿರ್ತಿ, ಶೇಖರ ಹೆಜಮಾಡಿ, ನಿವೃತ್ತ ಅಧಿಕಾರಿ ವಿಠಲದಾಸ್ ಬನ್ನಂಜೆ, ಮಂಗಳೂರು ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಗುಂಡ್ಮಿ, ಕ್ರೀಡಾ ಪಟು ಅನುರಾಗ್ , ಎಲ್‌ಐಸಿ ಅಧಿಕಾರಿ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net