ಅಂಬಟೆಮೂಲೆ ರಸ್ತೆಗೆ ಆಪತ್ತು : ಮಾರ್ಗದ ಅಡಿಯ ಭಾಗದ ಮಣ್ಣು ಕಿತ್ತು ಹೋಗಿ ಅಪಾಯ

road
Published on

ಶಶಿ ಕುತ್ಯಾಳ ಈಶ್ವರಮಂಗಲ

ಬಳ್ಳಿಕಾನ -ಅಂಬಟೆಮೂಲೆ-ಪುಳಿತ್ತಡಿ ಸಂಪರ್ಕ ರಸ್ತೆಯ ಕೂರ್ಮತ್ತಡ್ಕ ಎಂಬಲ್ಲಿ ರಸ್ತೆಯ ಅಂಚು ಕೊರೆತಕ್ಕೊಳಗಾಗಿ ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ.

ಅಂತರ್‌ರಾಜ್ಯ ಸಂಪರ್ಕ ರಸ್ತೆಗಳಾದ ಕೌಡಿಚ್ಚಾರು- ಸುಳ್ಯಪದವು ರಸ್ತೆಯ ಬಳ್ಳಿಕಾನದಿಂದ ಕಾವು- ಈಶ್ವರಮಂಗಲ ರಸ್ತೆಯ ಪುಳಿತ್ತಡಿಗೆ ನೇರ ಸಂಪರ್ಕದ ಜಿಲ್ಲಾ ಪಂಚಾಯಿತಿ ರಸ್ತೆ ಇದಾಗಿದೆ. ಈ ಬಾರಿ ಸುರಿದ ಭಾರಿ ಮಳೆಯ ಪರಿಣಾಮ ಈ ರಸ್ತೆಯ ಅಂಬಟೆಮೂಲೆ-ಪುಳಿತ್ತಡಿ ನಡುವಣ ಮುಗುಳಿ ಸಮೀಪದ ಕೂರ್ಮತ್ತಡ್ಕ ಎಂಬಲ್ಲಿ ಕೊರೆತಕ್ಕೊಳಗಾಗಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.

ಭಾರಿ ಮಳೆಯಿಂದಾಗಿ ಗುಡ್ಡ ಪ್ರದೇಶದಿಂದ ತಗ್ಗು ಪ್ರದೇಶದಲ್ಲಿರುವ ರಸ್ತೆಗೆ ರಭಸದಿಂದ ನೀರು ಹರಿದು ಬಂದ ಪರಿಣಾಮವಾಗಿ ರಸ್ತೆಯ ಅಡಿಭಾಗ ಕೊರೆತಕ್ಕೊಳಗಾಗಿದ್ದು, ಇದರಿಂದಾಗಿ ಡಾಂಬರು ಭಾಗ ಕುಸಿತಕ್ಕೊಳಗಾಗಿ ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದೆ. ಇನ್ನಷ್ಟು ಮಳೆಯಾದಲ್ಲಿ ಈ ರಸ್ತೆ ಸಂಪೂರ್ಣವಾಗಿ ಹಾನಿಗೊಂಡು ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.

ಅಂಬಟೆಮೂಲೆ ಭಾಗದ ಜನತೆ ತಮ್ಮ ಎಲ್ಲಾ ವ್ಯವಹಾರಗಳಿಗೆ ಈಶ್ವರಮಂಗಲ ಪೇಟೆಯನ್ನೇ ಅವಲಂಬಿಸಿಕೊಂಡಿದ್ದು, ಈ ಭಾಗದಲ್ಲಿ ಬಹಳಷ್ಟು ಮನೆಗಳಿವೆ. ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ದಿನನಿತ್ಯ ಈ ರಸ್ತೆಯಲ್ಲಿ ಹಲವಾರು ವಾಹನಗಳು ಓಡಾಡುತ್ತಿರುತ್ತವೆ.

ರಸ್ತೆ ಪಕ್ಕದಲ್ಲಿರುವ ಕಿರು ಸೇತುವೆ ಬಂದ್ ಆಗಿ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಮಳೆಯ ವೇಳೆ ತಾತ್ಕಾಲಿಕ ಸಂಚಾರ ಸ್ಥಗಿತ ಸಮಸ್ಯೆಯೂ ಎದುರಾಗುತ್ತಿದೆ. ಈ ಭಾಗದಲ್ಲಿ ರಸ್ತೆ ಬದಿಗೆ ಭದ್ರವಾದ ತಡೆಗೋಡೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಗ್ರಾಮಸ್ಥರು ಮನವಿ ಸಲ್ಲಿಸುತ್ತಾ ಬಂದಿದ್ದರೂ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಸಂಬಂಧಪಟ್ಟವರ ನಿರ್ಲಕ್ಷ್ಯದ ಪರಿಣಾಮವಾಗಿ ರಸ್ತೆಗೆ ಈ ಸ್ಥಿತಿ ಬಂದಿದೆ ಎಂಬುವುದು ಗ್ರಾಮಸ್ಥರ ಆರೋಪ.

ರಸ್ತೆ ಬದಿಯಲ್ಲೇ ಕೆರೆ

ಪಟ್ಲಡ್ಕ ಎಂಬಲ್ಲಿ ಅಂಬಟೆಮೂಲೆ ರಸ್ತೆಯ ತಿರುವು ಭಾಗದಲ್ಲಿ ರಸ್ತೆಯ ಅಂಚಿನಲ್ಲಿಯೇ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬೃಹತ್ ಕೆರೆಯೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಕೆರೆ ಮತ್ತು ರಸ್ತೆ ನಡುವಣ ಭಾಗದಲ್ಲಿ ಗಿಡಗಂಟೆಗಳು ಬೆಳೆದಿರುವುದರಿಂದ ರಸ್ತೆ ಅಂಚಿನಲ್ಲಿರುವ ಕೆರೆ ಗೋಚರಿಸುತ್ತಿಲ್ಲ. ಕೆರೆಯಿರುವ ಭಾಗದ ರಸ್ತೆಯ ಮತ್ತೊಂದು ಬದಿಯಲ್ಲಿ ನೀರು ಹರಿದು ಹೋಗುವ ತೋಡಿದೆ. ಇನ್ನೊಂದು ಭಾಗದಲ್ಲಿಯೂ ನೀರು ಹರಿದು ಹೋಗುವ ಕಣಿವೆಯೊಂದಿದೆ. ಕೆರೆಯಿರುವ ತಿರುವು ಭಾಗದಲ್ಲಿ ರಸ್ತೆಯೂ ಕಿರಿದಾಗಿದೆ. ವಾಹನ ಸವಾರರರು ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಕೆರೆಗೆ ವಾಹನ ಸಮೇತ ಬಿದ್ದು ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ.

ಇದೇ ರಸ್ತೆಯ ಸಾರಕೂಟೇಲು ಎಂಬಲ್ಲಿರುವ ಸೇತುವೆಯ ಒಂದು ಬದಿಯಲ್ಲಿ ಸೇತುವೆಯ ಕಾಂಕ್ರೀಟ್ ಕಳಚಿ ಹೋಗಿ ಬೃಹತ್ ಹೊಂಡ ಕೆಲ ತಿಂಗಳ ಹಿಂದೆ ನಿರ್ಮಾಣವಾಗಿತ್ತು. ಸೇತುವೆಯ ನಡುವಣ ಭಾಗದಲ್ಲಿನ ತಡೆಗೋಡೆ ಸರಳುಗಳು ಮುರಿದು ಹೋಗಿತ್ತು. ಹೊಂಡವನ್ನು ಬಡಗನ್ನೂರು ಗ್ರಾಮ ಪಂಚಾಯಿತಿ ಮುಚ್ಚಿದೆ. ಆದರೆ ಅದು ಶಾಶ್ವತ ಪರಿಹಾರ ಎಂದು ಹೇಳುವಂತಿಲ್ಲ. ಮತ್ತೆ ಬಿರುಕು ಬಿಡುವ ಸಾಧ್ಯತೆಯೂ ಇದೆ.

ಕೂರ್ಮತ್ತಡ್ಕದಲ್ಲಿ ರಸ್ತೆಯ ಭಾಗ ಕೊರತೆಕ್ಕೊಳಗಾಗಿ ಮತ್ತೊಂದು ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದೆ. ಕುಸಿತ ಕಂಡಿರುವ ರಸ್ತೆಯ ಭಾಗದಲ್ಲಿ ಅಡಿಪಾಯ ತೆಗೆದು ಕಗ್ಗಲ್ಲು ಬಳಸಿಕೊಂಡು ಭದ್ರ ತಡೆಗೋಡೆ ನಿರ್ಮಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕಿದೆ. ಇಲ್ಲದಿದ್ದರೆ ರಸ್ತೆಯೇ ಸಂಪೂರ್ಣವಾಗಿ ಕೊಚ್ಚಿಹೋಗುವ ಸಾಧ್ಯತೆ ಇದೆ. ರತ್ನಕುಮಾರ್ ರೈತ ಸಂಘ ಹಸಿರುಸೇನೆ ಮುಖಂಡ ತಡೆಗೋಡೆ ನಿರ್ಮಿಸಲು ಬಡಗನ್ನೂರು ಗ್ರಾಮ ಪಂಚಾಯಿತಿಯಿಂದ ಅನುದಾನ ಇರಿಸಲಾಗಿದೆ. ಕಳೆದ ವರ್ಷ ಹಾಗೂ ಈ ವರ್ಷ ಕಾಯ್ದಿರಿಸಿದ ಅನುದಾನವನ್ನು ಬಳಸಿಕೊಂಡು ಅಲ್ಲಿನ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಅಲ್ಲಿನ ಕಿರು ಸೇತುವೆಯಲ್ಲಿ ಮಳೆಗಾಲದಲ್ಲಿ ತ್ಯಾಜ್ಯಗಳು ತಂಬಿಕೊಂಡು ಸಮಸ್ಯೆ ಎದುರಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯಿಂದ ಆ ಸಮಸ್ಯೆಗೂ ಪರಿಹಾರವಾಗಬೇಕಿದೆ. ರವಿರಾಜ್ ರೈ ಸಜಂಕಾಡಿ ಬಡಗನ್ನೂರು ಗ್ರಾ.ಪಂ.ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net