

ವಿಜಯವಾಣಿ ಸುದ್ದಿಜಾಲ ಕೋಟ
ಕೋಟತಟ್ಟು ಗ್ರಾಪಂ ವ್ಯಾಪ್ತಿ ಹಾಗೂ ಸಾಲಿಗ್ರಾಮ ಪಪಂ ವ್ಯಾಪ್ತಿಗೆ ಹೊಂದಿಕೊಂಡಿರುವ ಅಂಬಾಲಕೆರೆಗೆ ರಾಷ್ಟ್ರೀಯ ಹೆದ್ದಾರಿ ನೀರು ಹರಿಯುತ್ತಿದ್ದು, ಕೆರೆ ಪೂರ್ಣ ಪ್ರಮಾಣದಲ್ಲಿ ಕುಸಿಯುವ ಹಂತದಲ್ಲಿದೆ.
ಕೆರೆಯ ನೀರು ಮಳೆಗಾಲದಲ್ಲಿ ತುಂಬಿ ಪಪಂ ವ್ಯಾಪ್ತಿಯ ಖಾಸಗಿ ಸ್ಥಳದ ಮೂಲಕ ತೋಡು ಸೇರುತ್ತಿತ್ತು. ಆದರೆ ಖಾಸಗಿದಾರರು ಮಣ್ಣು ತುಂಬಿಸಿ ಮನೆ ನಿರ್ಮಿಸಿ ನೀರು ಹರಿಯದಂತೆ ತಡೆಯೊಡ್ಡಿದ್ದಾರೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ನೀರು ಕೆರೆ ಸೇರುತ್ತಿದ್ದು, ಕೆರೆ ಪೂರ್ಣಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಇಲ್ಲಿನ ಸಮಸ್ಯೆ ಬಗ್ಗೆ ‘ವಿಜಯವಾಣಿ’ ಸಚಿತ್ರ ವರದಿ ಮಾಡಿ ಅಧಿಕಾರಿಗಳನ್ನು ಎಚ್ಚರಿಸಿತ್ತು. ಆದರೂ ಈವರೆಗೆ ಕ್ರಮ ಕೈಗೊಂಡಿಲ್ಲ.
ಕೆರೆಗೆ ಬೇರೆ ಬೇರೆ ಭಾಗಗಳಿಂದ ನೀರು ಹರಿಯಲ್ಪಡುತ್ತಿದೆ ಇನ್ನೊಂದೆಡೆ ಸುತ್ತಮುತ್ತಲಿನ ಕಟ್ಟಡ, ರಸ್ತೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಕೆರೆ ರಸ್ತೆ ಸನಿಹ ಕುಸಿಯುತ್ತಿದ್ದು, ಕೆಲವೆ ದಿನಗಳಲ್ಲಿ ರಸ್ತೆ ಸಂಚಾರಕ್ಕೆ ಸಂಚಕಾರ ತಂದೊಡ್ಡಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆಯ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸಬೇಕು, ರಸ್ತೆ ನೀರು ಕೆರೆಗೆ ಹರಿಯದಂತೆ ಬದಲಿ ಮಾರ್ಪಾಡುಗೊಳಿಸಬೇಕು, ಸ್ಥಳ ಒತ್ತುವರಿಗೆ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಿಂದಿನ ಅವಧಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಅದರಂತೆ ಅಲ್ಲಿನ ಮುಂದಿನ ಕ್ರಮಗಳ ಬಗ್ಗೆ ಸ್ಥಳೀಯಾಡಳಿತ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕ್ರಮಕೈಗೊಳ್ಳಲಿದ್ದೇವೆ.-ಮಹೇಶ್ಚಂದ್ರ, ಉಪವಿಭಾಗಾಧಿಕಾರಿ ಕುಂದಾಪುರ