

ಶ್ರವಣ್‌ಕುಮಾರ್ ನಾಳ, ಮಂಗಳೂರು
ಹೆಸರಿಗೆ ವಿಶಾಲ ಮೂಡುಶೆಡ್ಡೆ ಗ್ರಾಮ, ಆದರೆ ಇಲ್ಲಿ ದಲಿತ ಕುಟುಂಬಗಳೇ ಹೆಚ್ಚಿರುವ ಪ್ರದೇಶಕ್ಕೆ ಸಮರ್ಪಕ ಸಂಚಾರ ವ್ಯವಸ್ಥೆಯಿಲ್ಲದೆ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ಸ್ಮಾರ್ಟ್‌ಸಿಟಿ ನಗರದ ಹೊರವಲಯದಲ್ಲಿರುವ ಅಂದರೆ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೈಕೆರೆ ಪ್ರದೇಶಕ್ಕೆ ತೆರಳಲು ಸಮರ್ಪಕ ರಸ್ತೆ ಸಂಚಾರವೇ ಇಲ್ಲ. ಪ್ರಸ್ತುತ ಅಮೈಕೆರೆ ಪ್ರದೇಶವನ್ನು ನೋಡಿದಾಗ ಮೂಡುಶೆಡ್ಡೆ ಗ್ರಾಮದಲೊಂದು ರಸ್ತೆಯಿಲ್ಲದ ಕುಗ್ರಾಮವಿರುವಂತೆ ಬಾಸವಾಗುತ್ತದೆ. ಇಲ್ಲಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಇಲ್ಲಿ ಸಂಚರಿಸುವುದೇ ದುಸ್ತರವಾಗಿ ಬಿಟ್ಟಿದ್ದರಿಂದ ಸ್ಥಳೀಯರು ಈ ಹಿಂದೆ ಜಿಲ್ಲಾಧಿಕಾರಿಗೆ, ಜಿಲ್ಲಾ ಪಂಚಾಯಿತಿಗೆ ಅಮೈಕೆರೆಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿ ಮಾತ್ರ ಅಧಿಕಾರಿಗಳ ಟೇಬಲ್‌ನ ಮೂಲೆ ಸೇರಿದೆ.
*ದಲಿತ ಕುಟುಂಬಗಳೇ ಹೆಚ್ಚು
ಮೂಡುಶೆಡ್ಡೆ ಗ್ರಾಮದ ಅಮೈಕೆರೆ ವ್ಯಾಪ್ತಿಯಲ್ಲಿ ದಲಿತ ಕುಟುಂಬಗಳೇ ಹೆಚ್ಚಾಗಿದ್ದು, ಈ ಹಿಂದೆ ಇಲ್ಲಿನ ರಸ್ತೆಗೆ ಇಟರ್‌ಲಾಕ್ ಹಾಕಲಾಗಿತ್ತು. ಇಟರ್‌ಲಾಕ್ ಕಾಮಗಾರಿ ಕಳಪೆಯಾಗಿದ್ದರಿಂದ 1-2 ವರ್ಷದ ಬಳಿಕ ಇಲ್ಲಿನ ಸ್ಥಳಿಯಾಡಳಿತ ಈ ಇಟರ್‌ಲಾಕ್‌ನ್ನು ತೆರವುಗೊಳಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಯೋಜನೆ ರೂಪಿಸಿತ್ತು. ಆದರೆ ಇಟರ್‌ಲಾಕ್‌ನ್ನು ತೆರವುಗೊಳಿಸಿದ ಬಳಿಕ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗದೆ ಮಣ್ಣಿನ ಹೊಂಡಗುಂಡಿ ರಸ್ತೆ ಮಾತ್ರ ಉಳಿದುಕೊಂಡಿದೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ.
-----------------
ಇಟರ್‌ಲಾಕ್ ಏಲ್ಲಿದೆ?
ಅಮೈಕೆರೆ ವ್ಯಾಪ್ತಿಯಲ್ಲಿ ಈ ಹಿಂದೆ ಅಳವಡಿಸಿದ್ದ ಇಟರ್‌ಲಾಕ್‌ನ್ನು ತೆರವುಗೊಳಿಸಿದ ಬಳಿಕ ಇಲ್ಲಿದ್ದ ಇಟರ್‌ಲಾಕ್ ಎಲ್ಲಿದೆ ಎಂಬುವುದು ಸಾರ್ವಜನಿಕರ ಪ್ರಶ್ನೆ. ಈಬಗ್ಗೆ ಪಂಚಾಯಿತಿ ಅಧಿಕಾರಿಗೂ ಮಾಹಿತಿಯಿಲ್ಲ. ಆಡಳಿತ ನಡೆಸುವ ಗ್ರಾಮಪಂಚಾಯಿತಿ ಅಧ್ಯಕ್ಷರಿಗಂತೂ ತಿಳಿದೇ ಇಲ್ಲ. ಕಾಂಕ್ರೀಟ್ ರಸ್ತೆ ನಿರ್ಮಿಸುವ ಯೋಜನೆಯಿಂದ ಇಲ್ಲಿಂದ ತೆರವುಗೊಳಿಸಿದ ಇಟರ್‌ಲಾಕ್‌ನ್ನು ಈ ಹಿಂದಿನ ಪಂಚಾಯಿತಿ ಸದಸ್ಯನ ಕುಟುಂಬಸ್ಥರೊರ್ವರ ಮನೆಯ ಅಂಗಳಕ್ಕೆ ಅಳವಡಿಸಿರುವ ಆರೋಪವೂ ಇಲ್ಲಿದೆ.
------------------
ಮೂಡುಶೆಡ್ಡೆ ಗ್ರಾಮದ ಅಮೈಕೆರೆಗೆ ರಸ್ತೆಯಿಲ್ಲದ ಕುಗ್ರಾಮದಂತಿದೆ. ಆದರೆ ಈ ಬಗ್ಗೆ ಆಡಳಿತ ವ್ಯವಸ್ಥೆ ಜಾಣ ಕುರುಡುತನ ತೋರುತ್ತಿದ್ದು, ಅನೇಕ ಬಾರಿ ಪಂಚಾಯಿತಿ ಸದಸ್ಯರಿಗೆ ಮನವಿ ಸಲ್ಲಿಸಿದರು ರಸ್ತೆಯ ನಿರ್ಮಾಣ ಕಾರ್ಯ ನಡೆದಿಲ್ಲ. ಪರಿಶಿಷ್ಟ ಪಂಗಡ ಹಾಗೂ ಜಾತಿಯ ಕುಟುಂಬಗಳು ಈ ಪ್ರದೇಶದಲ್ಲಿ ಹೆಚ್ಚಾಗಿದ್ದರೂ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ ಸಮರ್ಪಕ ರಸ್ತೆಯ ನಿರ್ಮಾಣವನ್ನೂ ಆಡಳಿತ ಮಾಡಿಲ್ಲ, ಇದರಿಂದ ಇಲ್ಲಿ ಸಂಚರಿಸುವವರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಿಮ್ಮಪ್ಪ ಮೂಡುಶೆಡ್ಡೆ, ಸ್ಥಳೀಯರು
----------------
ಅಮೈಕೆರೆ ವ್ಯಾಪ್ತಿಗೆ ಮೂಲಸೌಕರ್ಯ ವ್ಯವಸ್ಥೆಗೆ ಅನುಗುಣವಾಗಿ ರಸ್ತೆ ನಿರ್ಮಾಣದ ಬೇಡಿಕೆಯೂ ಇದೆ. ಇಲ್ಲಿನ ಸ್ಥಳೀಯರ ಹಾಗೂ ಗ್ರಾಪಂ ಸದಸ್ಯರ ಗಮನಕ್ಕೆ ತಂದು ಇಲ್ಲಿಗೆ ನೂತನ ರಸ್ತೆ ನಿರ್ಮಾಣಕ್ಕೆ ಶೀಘ್ರದಲ್ಲಿ ವ್ಯವಸ್ಥೆ ಮಾಡಲಾಗುವುದು.
ಜಯಪ್ರಕಾಶ್, ಪಿಟಿಓ
ಮೂಡುಶೆಡ್ಡೆ ಗ್ರಾಪಂ
------------------
ಅಮೈಕೆರೆಗೆ ರಸ್ತೆ ಬೇಡಿಕೆಯಿದ್ದು, ಈಬಗ್ಗೆ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇಲ್ಲಿನ ಜನರ ಬೇಡಿಕೆಗೆ ಅನುಗುಣವಾಗಿ ಶೀಘ್ರದಲ್ಲಿ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ಅನೀಲ್ ಕುಮಾರ್,
ಮೂಡುಶೆಡ್ಡೆ, ಗ್ರಾಪಂ ಅಧ್ಯಕ್ಷರು