VIDEO | ಬಿಗ್ ಬಾಷ್‌ನಲ್ಲಿ ಪತ್ನಿಯ ಸ್ಫೋಟಕ ಶತಕಕ್ಕೆ ಸಾಕ್ಷಿಯಾದ ಆಸೀಸ್​ ವೇಗಿ ಮಿಚೆಲ್ ಸ್ಟಾರ್ಕ್

big bash web
Published on

ಮೆಲ್ಬೋರ್ನ್: ಪುರುಷ ಕ್ರಿಕೆಟಿಗರು ಮೈದಾನದಲ್ಲಿ ಅಮೋಘ ಸಾಧನೆ ತೋರಿದಾಗ ಅವರ ಪತ್ನಿ, ಗೆಳತಿಯರು ಕ್ರೀಡಾಂಗಣದಲ್ಲಿದ್ದು, ಪತಿಯ ಸಾಧನೆಯನ್ನು ಸಂಭ್ರಮಿಸುವುದು ಸಾಮಾನ್ಯವಾಗಿ ಕಾಣಸಿಗುವಂಥದ್ದು. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಬಿಗ್ ಬಾಷ್ ಲೀಗ್ ಟಿ20 ಟೂರ್ನಿಯಲ್ಲಿ ಕ್ರಿಕೆಟ್ ಆಟಗಾರ್ತಿ ಯಶಸ್ಸಿಗೆ ಆಕೆಯ ಪತಿ ಕ್ರೀಡಾಂಗಣದಲ್ಲಿ ಸಾಕ್ಷಿಯಾಗಿದ್ದು, ಆಕೆಯ ಯಶಸ್ಸನ್ನು ಸಂಭ್ರಮಿಸಿದ ಅಪರೂಪದ ಕ್ಷಣ ಭಾನುವಾರ ದಾಖಲಾಯಿತು.

ಈ ಆಟಗಾರ್ತಿಯ ಹೆಸರು ಅಲಿಸ್ಸಾ ಹೀಲಿ. ಆಕೆಯ ಪತಿ ಮಿಚೆಲ್ ಸ್ಟಾರ್ಕ್. ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಮಿಚೆಲ್ ಸ್ಟಾರ್ಕ್ ನಾರ್ತ್ ಸಿಡ್ನಿ ಓವಲ್ ಮೈದಾನದಲ್ಲಿ ಪತ್ನಿಯ ಆಟಕ್ಕೆ ಸಾಕ್ಷಿಯಾಗಿದ್ದರು. ಅಲಿಸ್ಸಾ ಹೀಲಿ (111 ರನ್, 52 ಎಸೆತ, 15 ಬೌಂಡರಿ, 6 ಸಿಕ್ಸರ್) 48 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸುವ ಮೂಲಕ ಮಿಂಚಿದರೆ, ಮಿಚೆಲ್ ಸ್ಟಾರ್ಕ್ ಚಪ್ಪಾಳೆ ತಟ್ಟುವ ಮೂಲಕ ಪತ್ನಿಯ ಸಾಧನೆಯನ್ನು ಸಂಭ್ರಮಿಸಿದರು.

ಅಲಿಸ್ಸಾ ಹೀಲಿ ಭರ್ಜರಿ ಶತಕದ ನೆರವಿನಿಂದ ಸಿಡ್ನಿ ಸಿಕ್ಸರ್ ತಂಡ ಮೆಲ್ಬೋರ್ನ್ ಸ್ಟಾರ್ಸ್‌ ತಂಡದ ವಿರುದ್ಧ 5 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿ ಬೀಗಿತು. ಪ್ರವಾಸಿ ಭಾರತ ವಿರುದ್ಧದ ಸರಣಿಗೆ ಪೂರ್ವಭಾವಿಯಾಗಿ ಮಿಚೆಲ್ ಸ್ಟಾರ್ಕ್, ಬಿಗ್ ಬಾಷ್ ಲೀಗ್‌ನಲ್ಲಿ ಆಡುತ್ತಿರುವ ಪತ್ನಿ ಅಲಿಸ್ಸಾ ಹೀಲಿ ಜತೆಗೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ.

ಸ್ಟಾರ್ಕ್ ಪತ್ನಿ ಅಲಿಸ್ಸಾ ಕ್ರಿಕೆಟ್ ಆಟಕ್ಕೆ ಸಾಕ್ಷಿಯಾಗಿದ್ದು ಇದೇ ಮೊದಲಲ್ಲ. ಈ ಮುನ್ನ ವರ್ಷಾರಂಭದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಿದಾಗ ಸ್ಟಾರ್ಕ್, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ತ್ಯಜಿಸಿ ಕ್ರೀಡಾಂಗಣಕ್ಕೆ ಬಂದು ಪತ್ನಿ ಟಿ20 ವಿಶ್ವಕಪ್ ಗೆಲುವು ದಾಖಲಿಸುವ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net