

ವಿಜಯವಾಣಿ ಸುದ್ದಿಜಾಲ ಗುರುಪುರ
ಹೊಂಡ ಗುಂಡಿಗಳಿಂದ ಸಂಚಾರಕ್ಕೆ ಕಷ್ಟಕರವಾಗಿದ್ದ ಸುರತ್ಕಲ್ ಎಂಆರ್ಪಿಎಲ್ ರಸ್ತೆಯ ಸುರತ್ಕಲ್ ರೈಲ್ವೆ ಸೇತುವೆ(ಬ್ರಿಡ್ಜ್) ಮೇಲೆ ಕಾಂಕ್ರೀಟ್ ಕಾಮಗಾರಿ ನಡೆಯಲಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ಮುಂದಿನ ಎರಡು ತಿಂಗಳು ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ.
ರೈಲ್ವೆ ಸೇತುವೆ ಕಾಂಕ್ರೀಟ್ಗೆ ರೈಲ್ವೆ ಇಲಾಖೆ ಅನುಮತಿ ನೀಡಿದ್ದು, ಡಿ.11ರಿಂದ ಮುಂದಿನ ವರ್ಷದ ಫೆಬ್ರವರಿ 8ರವರೆಗೆ ಒಟ್ಟು 58 ದಿನಗಳವರೆಗೆ ಕಾಮಗಾರಿ ನಡೆಯಲಿದೆ. ಈ ಸಂದರ್ಭ ಸಂಚಾರ ನಿಷೇಧಿಸಿ ಬದಲಿ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರು ಬದಲಿ ವ್ಯವಸ್ಥೆಗೆ ಆದೇಶಿಸಿದ್ದಾರೆ.
ಬದಲಿ ರಸ್ತೆ: ಉಡುಪಿಯಿಂದ ಕೃಷ್ಣಾಪುರ- ಕೈಕಂಬ- ಎಂಆರ್ಪಿಎಲ್ ಕಡೆಗೆ ಸಂಚರಿಸುವ ಲಘು ವಾಹನಗಳು ಎಡಕ್ಕೆ ತಿರುಗಿ ಸೂರಜ್ ಹೋಟೆಲ್ ಪಕ್ಕದ ರಸ್ತೆಯಿಂದ ಚೊಕ್ಕಬೆಟ್ಟು ಜಂಕ್ಷನ್ ಮೂಲಕ ಕೃಷ್ಣಾಪುರ/ ಕಾನ ಕಡೆಗೆ ಸಾಗುವುದು. ಉಡುಪಿಯಿಂದ ಕೃಷ್ಣಾಪುರ- ಕೈಕಂಬ- ಎಂಆರ್ಪಿಎಲ್ ಕಡೆಗೆ ಸಾಗುವ ಭಾರಿ ವಾಹನಗಳು ಹೊನ್ನಕಟ್ಟೆ ಜಂಕ್ಷನ್ಗೆ ಬಂದು ಎಡಕ್ಕೆ ತಿರುಗಿ ಕುಳಾಯಿ- ಕಾನ ರಸ್ತೆಯಲ್ಲಿ ಮುಂದುವರಿಯುವುದು. ಮಂಗಳೂರಿನಿಂದ ಕೃಷ್ಣಾಪುರ- ಕೈಕಂಬ- ಎಂಆರ್ಪಿಎಲ್ ಕಡೆಗೆ ಸಂಚರಿಸುವ ಭಾರಿ ವಾಹನಗಳು ಹೊನ್ನಕಟ್ಟೆ ಜಂಕ್ಷನ್ಗೆ ಬಂದು ಬಲಕ್ಕೆ ತಿರುಗಿ ಕುಳಾಯಿ- ಕಾನ ರಸ್ತೆಯಲ್ಲಿ ಸಾಗುವುದು. ಎಂಆರ್ಪಿಎಲ್ ಕಡೆಯಿಂದ ಸುರತ್ಕಲ್ ಕಡೆಗೆ ಬರುವ ವಾಹನಗಳು ಕಾನ ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ ಕುಳಾಯಿ ಹೊನ್ನಕಟ್ಟೆ ಮಾರ್ಗವಾಗಿ ಮುಂದುವರಿಯುವುದು.
ಸುರತ್ಕಲ್ ಎಂಆರ್ಪಿಎಲ್ ರಸ್ತೆಯ ರೈಲ್ವೆ ಸೇತುವೆ ಕಾಂಕ್ರೀಟ್ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆ 78 ಲಕ್ಷ ರೂ. ಮಂಜೂರು ಮಾಡಿದೆ. ಕಾಮಗಾರಿ ಸಂದರ್ಭದಲ್ಲಿ ಒಂದೆರಡು ತಿಂಗಳು ಬದಲಿ ರಸ್ತೆ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ವಾಹನ ಸವಾರರು ಸಹಕರಿಸಬೇಕು. ಡಾ.ಭರತ್ ಶೆಟ್ಟಿ, ಮಂಗಳೂರು ಉತ್ತರ ಶಾಸಕ https://www.vijayavani.net/alvas-virasat https://www.vijayavani.net/nadur-bramhakalasha