ಪಠ್ಯದ ಜತೆಗೆ ಕ್ರೀಡೆಗೂ ಆದ್ಯತೆ: ರೋಸ್ ಲೀಟಾ ಸಲಹೆ

Gur_Rosa-Mistica
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಪಂದ್ಯಾಟಗಳು ಮಕ್ಕಳ ಕ್ರೀಡಾ ಪ್ರತಿಭೆಯ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗುತ್ತವೆ. ಮಕ್ಕಳು ಪಠ್ಯದ ಜತೆಗೆ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ವಿಶೇಷ ಸಾಧನೆ ಮಾಡಬೇಕು ಎಂದು ರೋಸಾ ಮಿಸ್ತಿಕಾ ಶಾಲೆಯ ಸಂಚಾಲಕಿ ಸಿ.ರೋಸ್ ಲೀಟಾ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಕಿನ್ನಿಕಂಬಳದ ಅನುದಾನಿತ ರೋಸಾ ಮಿಸ್ತಿಕಾ ಪ್ರೌಢಶಾಲೆ ಆಶ್ರಯದಲ್ಲಿ ಶಾಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಗುರುಪುರ ಹೋಬಳಿ ಮಟ್ಟದ ತ್ರೋಬಾಲ್ ಪಂದ್ಯಾಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್ ಉದ್ಘಾಟಿಸಿದರು. ದಕ್ಷಿಣ ವಲಯ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಶೇಖರ ಕಡ್ತಲ, ಸಿಆರ್‌ಪಿಗಳಾದ ಶೀಲಾವತಿ, ನಿರ್ಮಲಾ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜೆಪ್ರಿಯನ್ ತಾವ್ರೋ, ಕೋಶಾಧಿಕಾರಿ ಮೆಲ್ವಿನ್ ಸಲ್ಡಾನ, ತಾಪಂ ಮಾಜಿ ಸದಸ್ಯ ಸುನೀಲ್ ಗಂಜಿಮಠ, ಶಿಕ್ಷಕಿ ಐರಿನ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಗೀತಾ, ಶಾಲಾ ಹಳೇ ವಿದ್ಯಾರ್ಥಿ ಸಂಘ ಮತ್ತು ಲಯನ್ಸ್ ಕ್ಲಬ್ ಗುರುಪುರ-ಕೈಕಂಬ ಶಾಖೆಯ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಮರಿಸ್ಸಾ ಲೂಸಿ ಪಿಂಟೋ ಸ್ವಾಗತಿಸಿದರು. ಪ್ರಮೋದ್ ನಿರೂಪಿಸಿದರು. ಶಿಕ್ಷಕ ಲ್ಯಾನ್ಸಿ ಸಿಕ್ವೇರ ವಂದಿಸಿದರು.

ಸೇಂಟ್ ರೇಮಂಡ್ಸ್ ಶಾಲೆಗೆ ಪ್ರಶಸ್ತಿ

ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ ಅವರು ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಬಾಲಕರು ಮತ್ತು ಬಾಲಕಿಯರ ವಿಭಾಗಗಳಲ್ಲಿ ವಾಮಂಜೂರಿನ ಸೇಂಟ್ ರೇಮಂಡ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ ಸ್ಥಾನ ಗಳಿಸಿದೆ. ಬಾಲಕರ ವಿಭಾಗದಲ್ಲಿ ರೋಸಾ ಮಿಸ್ತಿಕಾ ಶಾಲೆ ಮತ್ತು ಬಾಲಕಿಯರ ವಿಭಾಗದಲ್ಲಿ ಗುರುಪುರದ ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನ ಗಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net