

ಹೈದರಾಬಾದ್: ಆಂಧ್ರ ಮತ್ತು ತೆಲಂಗಾಣದಲ್ಲಿ ಸಿನಿಕ್ರೇಜ್ ಹೆಚ್ಚು ಎಂಬುದು ತಿಳಿದ ಸಂಗತಿಯೇ. ಸ್ಟಾರ್ ಹೀರೋಗಳ ಹುಟ್ಟಿದ ದಿನ ಬಂದರೆ ಹಬ್ಬದ ವಾತಾವರಣವಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಂತಹ ಸಂಭ್ರಮ ಸೋಮವಾರ(ಸೆ.2) ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಒದಗಿ ಬಂದಿದೆ. ವಿಶೇಷವೇನೆಂದರೆ ಹಾವು-ಮುಂಗಸಿಯಂತಿದ್ದ ಪವನ್ - ಅಲ್ಲು ಅರ್ಜುನ್ ಈ ವಿಶೇಷ ದಿನದೊಂದಿಗೆ ಒಂದಾಗುತ್ತಾರಾ ಎಂಬಂತಹ ಘಟನೆಯೊಂದು ನಡೆದಿದೆ. ಅಲ್ಲು ಅರ್ಜುನ್(ಬನ್ನಿ) ಪವನ್ ಗಾಗಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ.
ಪವನ್ ಕಲ್ಯಾಣ್ ಹುಟ್ಟುಹಬ್ಬವನ್ನು ಅಭಿಮಾನಿಗಳು ತುಂಬಾ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಚಲನಚಿತ್ರ ಗಣ್ಯರಿಂದಲೂ ಶುಭಾಶಯ ಹರಿದು ಬರುತ್ತಿವೆ. ಈ ಸಂಭ್ರಮಕ್ಕೆ ಬನ್ನಿ ಈ ರೀತಿ ದನಿಗೂಡಿಸಿದ್ದಾರೆ. 'ಅಭಿಮಾನಿಗಳ ನಡುವೆ ಯುದ್ಧಗಳಿವೆ, ಆದರೆ ವೀರರ ನಡುವೆ ಯಾವುದೇ ಯುದ್ಧಗಳಿಲ್ಲ. ಪವರ್ ಸ್ಟಾರ್ ಮತ್ತು ಉಪ ಮುಖ್ಯಮಂತ್ರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಸ್ತುತ ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ನಡುವೆ ಹಂಚಿಕೊಳ್ಳಲಾಗುತ್ತಿದ್ದು, ವೈರಲ್ ಆಗಿದೆ.
ಮತ್ತೊಂದೆಡೆ ಪವನ್ ಹುಟ್ಟುಹಬ್ಬಕ್ಕೆ ಗಬ್ಬರ್ ಸಿಂಗ್ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರೊಂದಿಗೆ ಪವನ್ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ಬರುತ್ತದೆಯೇ ಎಂದು ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.