

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್ ಚಿತ್ರದ ಶೀರ್ಷಿಕೆ ಏನು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಅಂದರೆ, ಅಲ್ಲು ಅರ್ಜುನ್ ಬರ್ತಡೇ (ಏ. 8) ಪ್ರಯುಕ್ತ ಇಂದು ಮೈತ್ರಿ ಮೂವಿ ಮೇಕರ್ಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು, ಪುಷ್ಪ ಎಂಬ ಟೈಟಲ್ ಅಂತಿಮವಾಗಿದೆ.
ಈಗಾಗಲೇ ಟಾಲಿವುಡ್ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಳ್ಳುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ, ಈಗ ಅಲ್ಲು ಅರ್ಜುನ್ ಜತೆಗೂ ನಟಿಸಲು ಸಿದ್ಧರಾಗಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ, ಈ ಸಿನಿಮಾ ಮೂಲ ತೆಲುಗಿನ ಜತೆಯಲ್ಲಿ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ತೆರೆಕಾಣಲಿದೆ. ಈಗಾಗಲೇ ಚಿತ್ರೀಕರಣ ಕೆಲಸಗಳು ಬಹುತೇಕ ಮುಗಿಯುವ ಹಂತದಲ್ಲಿದ್ದು, ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಬಾಕಿ ಉಳಿದ ಶೂಟಿಂಗ್ಗೆ ಬ್ರೇಕ್ ಹಾಕಲಾಗಿದೆ. ಲಾಕ್ಡೌನ್ ತೆರವಾಗುತ್ತಿದ್ದಂತೆ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಹಾಗಾದರೆ ಸಿನಿಮಾ ಕಥೆ ಏನು? ನೆಲ್ಲಮಾಲ ದಟ್ಟಾರಣ್ಯದಲ್ಲಿ ನಡೆಯುವ ಸ್ಮಗ್ಲಿಂಗ್ ಹಿನ್ನೆಲೆಯನ್ನಿಟ್ಟುಕೊಂಡು ಚಿತ್ರಮೂಡಿಬರಲಿದ್ದು, ಸೈರಾ ಚಿತ್ರದ ಮೂಲಕ ಟಾಲಿವುಡ್ಗೆ ಪ್ರವೇಶ ಪಡೆದಿದ್ದ ವಿಜಯ ಸೇತುಪತಿ ಪುಷ್ಪಾ ಚಿತ್ರದಲ್ಲಿ ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.