ವಿವಾದದ ಸುಳಿಯಲ್ಲಿ ಪುಷ್ಪರಾಜ್! ಮೂತ್ರ ವಿಸರ್ಜನೆ ದೃಶ್ಯದಿಂದ ಅಲ್ಲು ಅರ್ಜುನ್​ಗೆ ಎದುರಾಯ್ತು ಸಂಕಷ್ಟ | Allu Arjun

Allu Arjun
Published on

Allu Arjun : ಬಹುನಿರೀಕ್ಷಿತ ಪುಷ್ಪ-2 ಸಿನಿಮಾ ಬಿಡುಗಡೆಯಾದ ದಿನದಿಂದ ನಟ ಅಲ್ಲು ಅರ್ಜುನ್​ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಚಿತ್ರದ ಪ್ರೀಮಿಯರ್​ ಶೋ ವೇಳೆ ಉಂಟಾದ ಕಾಲ್ತುಳಿತದಿಂದ ರೇವತಿ ಹೆಸರಿನ ಮಹಿಳೆ ಮೃತಪಟ್ಟರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ ಪೊಲೀಸರು ಅಲ್ಲು ಅರ್ಜುನ್​ರನ್ನು ಬಂಧಿಸಿದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು.

ಇದಿಷ್ಟೇ ಅಲ್ಲದೆ, ಈ ಪ್ರಕರಣ ರಾಜಕೀಯ ತಿರುವು ಸಹ ಪಡೆದುಕೊಂಡಿತು. ಅಲ್ಲು ಅರ್ಜುನ್​ ಬಂಧನದ ಹಿಂದೆ ಸಿಎಂ ರೇವಂತ್​ ರೆಡ್ಡಿ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತು. ಆದರೆ, ಇದನ್ನು ಸಿಎಂ ಅಲ್ಲಗೆಳೆದರು. ಇಷ್ಟಕ್ಕೆ ಸುಮ್ಮನಾಗಿದ್ದರೆ ವಿವಾದ ತಣ್ಣಗಾಗುತ್ತಿತ್ತು. ಆದರೆ, ಅಲ್ಲು ಅರ್ಜುನ್​ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಮತ್ತು ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಸಿಎಂ ಕೂಡ ಇದಕ್ಕೆ ತಿರುಗೇಟು ನೀಡಿದರು. ನಟರಾದವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕೆಂದರು. ಇದರ ನಡುವೆ ಮೊನ್ನೆ ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲು ತೂರಾಟವು ನಡೆದಿತ್ತು. ಕಾಂಗ್ರೆಸ್​ ಕಾರ್ಯತರು ಈ ರೀತಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ಇದೆಲ್ಲದರ ನಡುವೆ ಅಲ್ಲು ಅರ್ಜುನ್​ ಅವರನ್ನು ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತ ಪ್ರಕರಣದಲ್ಲಿ ಹೈದರಾಬಾದ್​ ಪೊಲೀಸರು ಮತ್ತೊಮ್ಮೆ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಪೊಲೀಸ್ ಅಧಿಕಾರಿಗಳು ಅಲ್ಲು ಅರ್ಜುನ್ ಅವರ ಮನೆಗೆ ತೆರೆಳಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಚಿಕ್ಕಡಪಲ್ಲಿ ಠಾಣೆ ತಲುಪಿ, ವಿಚಾರಣೆ ಎದುರಿಸಿದ್ದಾರೆ. ಇದರ ನಡುವೆ ಅಲ್ಲು ಅರ್ಜುನ್​ ವಿರುದ್ಧ ಕಾಂಗ್ರೆಸ್​ ನಾಯಕರೊಬ್ಬರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಅಲ್ಲು ಅರ್ಜುನ್ ಮಾತ್ರವಲ್ಲದೆ, ನಿರ್ದೇಶಕ ಸುಕುಮಾರ್, ನಿರ್ಮಾಪಕರು ಹಾಗೂ ಇತರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ತೀನ್ಮಾರ್ ಮಲ್ಲಣ್ಣ ಪೊಲೀಸ್ ದೂರು ದಾಖಲಿಸಿದ್ದಾರೆ. ಕಾರಣವೇನೆಂದರೆ, ಪುಷ್ಪ 2 ಸಿನಿಮಾದಲ್ಲಿ ಒಂದು ದೃಶ್ಯವಿದೆ. ಅಲ್ಲು ಅರ್ಜುನ್​ ಅವರು ಕಾರಿನಿಂದ ಪೊಲೀಸ್​ ಅಧಿಕಾರಿಯ ಕಾರಿ ಡಿಕ್ಕಿ ಹೊಡೆದು ಅಧಿಕಾರಿಯನ್ನು ಸ್ವಿಮ್ಮಿಂಗ್​ ಫೂಲ್​ ಒಳಗೆ ಬೀಳಿಸಿ, ಅದರೊಳಗೆ ಮೂತ್ರ ವಿಸರ್ಜನೆ ಮಾಡಿ ಅವಮಾನಿಸುತ್ತಾನೆ. ಈ ದೃಶ್ಯವನ್ನು ಆಧರಿಸಿ ದೂರು ನೀಡಲಾಗಿದೆ.

ಈ ದೃಶ್ಯವು ಆಕ್ಷೇಪಾರ್ಹವಾಗಿದೆ. ಕಾನೂನು ಜಾರಿ ಅಧಿಕಾರಿಗಳ ಘನತೆಗೆ ಧಕ್ಕೆ ತರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಸದ್ಯ ಅಲ್ಲು ಅರ್ಜುನ್​ ವಿವಾದಗಳ ಕಾರಣದಿಂದ ಭಾರಿ ಚರ್ಚೆಯಲ್ಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net