

ಇಂದೋರ್: ಲಾಕ್ಡೌನ್ ಸಮಯದಲ್ಲಿ, ರೆಡ್ ಝೋನ್ ಅಥವಾ ಸೀಲ್ ಡೌನ್ ಆದ ಪ್ರದೇಶದ ನಿವಾಸಿಗಳಾಗಿದ್ದರೆ ಅವರ ಕಷ್ಟವನ್ನಂತೂ ದೇವರೇ ಬಲ್ಲ ಎನ್ನುವಂತಾಗಿದೆ. ಅಗತ್ಯ ಸೇವೆಗಳಿರಲಿ, ವೈದ್ಯಕೀಯ ನೆರವು ಕೂಡ ಮರಿಚೀಕೆಯಾಗುತ್ತದೆ ಎನ್ನುವುದಕ್ಕೆ ಮಧ್ಯಪ್ರದೇಶದ ಎರಡು ಘಟನೆಗಳೇ ಸಾಕ್ಷಿಯಾಗಿವೆ.
ಇಂದೋರ್ ಹಾಗೂ ಖಾಂಡ್ವಾ ಜಿಲ್ಲೆಯಲ್ಲಿನ ಎರಡು ಘಟನೆಗಳು ಥೇಟ್ ತ್ರೀ ಈಡಿಯಟ್ ಚಿತ್ರದ ಸನ್ನಿವೇಶವನ್ನೇ ನೆನಪಿಸುತ್ತವೆ. ಚಿತ್ರದಲ್ಲಿ ಆಂಬುಲೆನ್ಸ್ ಸಿಗದಿದ್ದಾಗ ಆಮೀರ್ಖಾನ್ ಹಾಗೂ ಕರೀನಾ ಕಪೂರ್ ಸ್ಕೂಟರ್ನಲ್ಲಿ ಮುಕುಂದ್ ಭಟ್ನನ್ನು (ರಸ್ತೋಗಿ) ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಥೇಟ್ ಅದೇ ಮಾದರಿಯಲ್ಲಿ ಇಂದೋರ್ನ ಬಾಡ್ವಾಲಿ ಚೌಕಿ ನಿವಾಸಿ ಪಾಂಡು ಚಂದಾನೆ(60) ಎಂಬುವರನ್ನು ಸಂಬಂಧಿಕರು ಆಂಬುಲೆನ್ಸ್ ಸಿಗದ ಕಾರಣ ಸ್ಕೂಟರ್ನಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಆದರೆ, ಚಿತ್ರದ ಸನ್ನಿವೇಶದಂತೆ ಇಲ್ಲಿ ಸುಖಾಂತ್ಯವಾಗಲಿಲ್ಲ ಎನ್ನುವುದು ದುರಂತ.
ಬಾಡವಾಲಿ ಚೌಕಿ ಪ್ರಸ್ತುತ ಕಂಟೈನ್ಮೆಂಟ್ ಝೋನ್ ಆಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪಾಂಡು ಅವರನ್ನು ಹಿಂದಿನ ದಿನವಷ್ಟೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಕೆಲ ಔಷಧ ನೀಡಿ ಮನೆಗೆ ಕಳುಹಿಸಿದ್ದರು. ಮರುದಿನ ಅನಾರೋಗ್ಯ ಉಲ್ಬಣಿಸಿದಾಗ ಮನೆಯವರು ಆಂಬುಲೆನ್ಸ್ಗೆ ಕರೆಮಾಡಿದ್ದಾರೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಸೌಲಭ್ಯ ನಿರಾಕರಿಸಲಾಗಿದೆ. ಕೊನೆಗೆ ಸರ್ಕಾರಿ ಎಂವೈ ಆಸ್ಪತ್ರೆಗೆ ಸ್ಕೂಟರ್ನಲ್ಲಿಯೇ ಕರೆದೊಯ್ದರೂ ಪ್ರಯೋಜನವಾಗಿಲ್ಲ.
ಆದರೆ, ಇದನ್ನು ನಿರಾಕರಿಸಿರುವ ಇಂದೋರ್ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಪ್ರವೀನ್ ಜಡಿಯಾ, ರೋಗಿಯನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದರು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ರೋಗಿ ಮೃತಪಟ್ಟಿದ್ದರು ಎಂದು ತಿಳಿಸಿದ್ದಾರೆ.
ಈ ನಡುವೆ ಮೃತನ ಕುಟುಂಬಸ್ಥರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಖಾಂಡ್ವಾ ಜಿಲ್ಲೆಯ ಖಡಕ್ಪುರದಲ್ಲೂ ಆಂಬುಲೆನ್ಸ್ ಸಿಗದೆ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಶೇಕ್ ಹಮೀದ್ (65) ಅವರನ್ನು ಸ್ಕೂಟರ್ನಲ್ಲಿ ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಿಕೊಳ್ಳಲಾಗಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಖಡಕ್ಪುರ ಕೂಡ ಕರೊನಾ ಪೀಡಿತ ಪ್ರದೇಶವಾಗಿದೆ.
ಮಧ್ಯಪ್ರದೇಶದಲ್ಲಿ ಈವರೆಗೆ 900ಕ್ಕೂ ಅಧಿಕ ಕರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 53 ಜನರು ಮೃತಪಟ್ಟಿದ್ದಾರೆ. ಅದರಲ್ಲೂ ಇಂದೋರ್ವೊಂದರಲ್ಲಿಯೇ 200ಕ್ಕೂ ಅಧಿಕ ಕೋವಿಡ್-19 ಪೀಡಿತರಿದ್ದಾರೆ. ಈ ಎರಡು ಘಟನೆಗಳು ರಾಜ್ಯದಲ್ಲಿ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿವೆ. ಆಪರೇಷನ್ ಕಮಲದ ಬಳಿಕ ಕಮಲ್ನಾಥ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಿ ಶಿವರಾಜ್ಸಿಂಗ್ ಚೌಹಾಣ್ ಸಿಎಂ ಆಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.