ಬಟನ್ ಬಿಚ್ಚಿದ ಶರ್ಟ್ ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ; ನ್ಯಾಯಾಧೀಶರು ಕೊಟ್ಟ ಶಿಕ್ಷೆ ಏನು ಗೊತ್ತಾ? | Lawyer sentenced

Untitled design (10)
Published on

ಲಖನೌ: ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹೊತ್ತಿರುವ ವಕೀಲ ಅಶೋಕ್ ಪಾಂಡೆ ಅವರನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ದೋಷಿ ಎಂದು ತೀರ್ಪು(Lawyer sentenced) ನೀಡಿ, ಆರು ತಿಂಗಳ ಸರಳ ಜೈಲು ಶಿಕ್ಷೆ ಮತ್ತು 2,000 ರೂಪಾಯಿ ದಂಡ ವಿಧಿಸಿದೆ. ಲಖನೌದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಲು ನ್ಯಾಯಾಲಯವು ತಪ್ಪಿತಸ್ಥ ವಕೀಲರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಇದರೊಂದಿಗೆ ನ್ಯಾಯಾಲಯವು ವಕೀಲರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಮತ್ತು ಅಲಹಾಬಾದ್ ಹೈಕೋರ್ಟ್ ಮತ್ತು ಲಖನೌ ಪೀಠದಲ್ಲಿ ಮೂರು ವರ್ಷಗಳ ಕಾಲ ಪ್ರಾಕ್ಟೀಸ್ ಮಾಡುವುದನ್ನು ಏಕೆ ನಿರ್ಬಂಧಿಸಬಾರದು ಎಂದು ಕೇಳಿದೆ. ವಕೀಲ ಅಶೋಕ್ ಪಾಂಡೆ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಬ್ರಿಜ್‌ರಾಜ್ ಸಿಂಗ್ ಅವರ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.

2021 ಆಗಸ್ಟ್ 18ರಂದು ನ್ಯಾಯಾಲಯವು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿತ್ತು. ವಕೀಲ ಅಶೋಕ್ ಪಾಂಡೆ ಅವರು ಸಮವಸ್ತ್ರವಿಲ್ಲದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಹಾಜರಾಗಿದ್ದರು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಈ ಬಗ್ಗೆ ಕೇಳಿದಾಗ, ಅಶೋಕ್ ಪಾಂಡೆ ಅವರು ಪ್ರಸ್ತುತ ಅರ್ಜಿಯನ್ನು ಸಲ್ಲಿಸಿದವರು ತಾವೇ ಆಗಿರುವುದರಿಂದ, ಅವರು ಸಮವಸ್ತ್ರ ಧರಿಸುವ ಅಗತ್ಯವಿಲ್ಲ ಎಂದು ಹೇಳಿದರು.

ನ್ಯಾಯಾಲಯವು ವಕೀಲ ಅಶೋಕ್​ ಪಾಂಡೆ ಶರ್ಟ್‌ನ ಗುಂಡಿಗಳನ್ನು ಮೇಲಕ್ಕೆತ್ತಲು ಸಹ ಕೇಳಿತು. ಇದರಿಂದ ಕೋಪಗೊಂಡ ಅಶೋಕ್ ಪಾಂಡೆ ಆಕ್ಷೇಪಾರ್ಹ ಪದಗಳನ್ನು ಬಳಸಲು ಪ್ರಾರಂಭಿಸಿದರು. ನ್ಯಾಯಾಲಯದ ಕೊಠಡಿಯಿಂದ ಹೊರ ಕಳುಹಿಸುವ ಎಚ್ಚರಿಕೆ ನೀಡಿದಾಗ, ನ್ಯಾಯಾಲಯಕ್ಕೆ ಅಧಿಕಾರವಿದ್ದರೆ ತನ್ನನ್ನು ಹೊರಗೆ ಕಳುಹಿಸಲಿ ಎಂದು ಹೇಳಿದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಅಶೋಕ್ ಪಾಂಡೆ ಹೇಳಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನ್ಯಾಯಾಲಯವು ತನ್ನ ಆದೇಶದಲ್ಲಿ ಅಶೋಕ್ ಪಾಂಡೆ ಹಿಂದೆ ಮಾಡಿದ ಆಕ್ಷೇಪಾರ್ಹ ನಡವಳಿಕೆಯನ್ನು ಸಹ ವಿವರಿಸಿದೆ.

ಇದೇ ಹೈಕೋರ್ಟ್ ಈ ಹಿಂದೆ ಅಶೋಕ್ ಪಾಂಡೆಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಅಲ್ಲದೆ ಎರಡು ವರ್ಷಗಳ ಕಾಲ ಹೈಕೋರ್ಟ್ ಆವರಣ ಪ್ರವೇಶಿಸದಂತೆ ಅವರಿಗೆ ನಿರ್ಬಂಧ ಹೇರಲಾಗಿದೆ. ಸುಪ್ರೀಂ ಕೋರ್ಟ್ ಜೈಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು ಆದರೆ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸುವ ನಿಷೇಧವನ್ನು ಕಾಯ್ದುಕೊಂಡಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net