

ಅಕಾಪುಲ್ಕೋ (ಮೆಕ್ಸಿಕೋ): ಚೇರ್ ಅಂಪೈರ್ ಮೇಲೆ ರ‌್ಯಾಕೆಟ್‌ನಿಂದ ಹಲ್ಲೆ ಮಾಡಲು ಯತ್ನಿಸಿದ ಜರ್ಮನಿಯ ಸ್ಟಾರ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್, ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಿಂದ ಅಮಾನತುಗೊಂಡು ಹೊರಬಿದ್ದಿದ್ದಾರೆ.
ಬ್ರೆಜಿಲ್‌ನ ಜತೆಗಾರ ಮಾರ್ಷೆಲೊ ಮೆಲೋ ಜತೆಗಿನ ಡಬಲ್ಸ್ ವಿಭಾಗದ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬ್ರಿಟನ್‌ನ ಲಾಯ್ಡ ಗ್ಲಾಸ್‌ಪೂಲ್ ಮತ್ತು ಫಿನ್‌ಲ್ಯಾಂಡ್‌ನ ಹ್ಯಾರಿ ಹೆಲಿಯೊವಾರ ವಿರುದ್ಧದ 2-6, 6-4, 6-10ರಿಂದ ಸೋತ ಬಳಿಕ ಜ್ವೆರೇವ್ ಅಂಪೈರ್ ಬಳಿ ತೆರಳಿ ಅವರು ಕುಳಿತಿದ್ದ ಚೇರ್‌ಗೆ ರ‌್ಯಾಕೆಟ್‌ನಿಂದ ಹೊಡೆದಿದ್ದಾರೆ.
ಈ ವೇಳೆ ಅಂಪೈರ್ ಕಾಲಿಗೆ ಪೆಟ್ಟು ಬೀಳುವುದನ್ನು ತಪ್ಪಿಸಿಕೊಂಡಿದ್ದಾರೆ. ಇದರಿಂದಾಗಿ 24 ವರ್ಷದ ಜ್ವೆರೇವ್ ಸಿಂಗಲ್ಸ್ ವಿಭಾಗದ 16ರ ಘಟ್ಟದ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಎಟಿಪಿಯಿಂದ ಅವರಿಗೆ ದಂಡ ಶಿಕ್ಷೆಯ ಜತೆಗೆ ಒಂದು ವರ್ಷದವರೆಗೆ ನಿಷೇಧವೂ ಎದುರಾಗುವ ಸಾಧ್ಯತೆ ಇದೆ.