

ಮುಂಜ-ಮುಂಜಾನೆ 6 ಗಂಟೆಗೆ ರೆಡಿ ಆಗಿ ಹೊಂಟಬರ್ರಿ ಅಂತ ಹೇಳೋದಲ್ದ ನಮ್ಮ ಕೆಕೆಸಿಡಿ “ಪುಷ್ಪ” ಅವರು ಒಂದು ಪ್ರಯಾಣದ ಸೂಚಿನ ಕಳಸಿದ್ರಪ. ಯಾಕ್ರಿ “ಪುಷ್ಪ” ಯಾರಂತ ಗೊತ್ತಾಗ್ಲಿಲ್ಲ? ಹೊಗ್ಗೊ ಮಾರಾಯ … "ಪುಷ್ಪ" ಅಂದ್ರ ಏನ ಹೇಳ್ರಿ ? Fire ಮತ್ತ ಅದ ಕನ್ನಡವಳಗ "ಬೆಂಕಿ" … ಈಗ ಗೊತ್ತಾತಲಾ, ನಮ್ಮ "ಬೆಂಕಿ ಬಸಣ್ಣ ಸರ್" ಕಳಸಿದ್ದ ಅಂತ?
ಸುಮಾರ ಎರಡ ತಿಂಗಳಿಂದ, ಮಾತು-ಕಥಿ ಮಾಡಿ, ಎಲ್ಲ ವಿಷಯ ಸಂಗ್ರಹ ಮಾಡಿ, ಬಸ್ ಬುಕ್ ಮಾಡೋದ್ರಿಂದ ಹಿಡದ ತಿಂಡಿ, ಊಟ, ಚಹಾ ತನಕ ತಲಿಕೆಡಿಶ್ಕೊಂಡ ತಯಾರಿ ಮಾಡಿದ್ವಿರಿ ನಾವ ಕನ್ನಡ ಕೂಟದ ಕಾರ್ಯಕರ್ತರು. ರಾವಣಗ 10 ತಲಿ ಆದ್ರ ನಮ್ಮೆಲಾರ್ದು ಸೇರಿ 11 ತಲಿ ಓಡಿಸಿ ಮಾಡಿದ “ದಿನ-ಪ್ರವಾಸ” ಹೆಂಗಿತ್ತ ನೋಡೋಣ ಬರ್ರಿ ಮತ್ತ. ನಮ್ಮ ಕಾರ್ಯಕಾರಿಣಿ ಸಮಿತಿಯಲ್ಲಿ 11 ಜನರಿದ್ದೇವೆ.
ಮತ್ತೆ ಬಸ್-ಗಿಸ್ ರಿಜರ್ವ್ ಮಡೋದ್ರಿಂದ, ಊಟ-ತಿಂಡಿ-ಫರಾಳ ಎಲ್ಲಾಕಿಂತ ಮುಖ್ಯ ಚಹಾ ತರಸೋದು, ಕಾರ್ನಿಂಗ್ ಗ್ಲಾಸ್‌ಮ್ಯೂಸಿಯಂ ಟಿಕೆಟ್ಸ್, ವೈನ್-ಯಾರ್ಡ ಟಿಕೆಟ್ಗಳು, ಎಲ್ಲೆಲ್ಲಿ ಎಷ್ಟೋತನ ನಿಲ್ಲೋದು, ಅಂತಾ ಎಲ್ಲ ಕಮೀಟಿ ಮೀಟಿಂಗ್ನಲ್ಲಿ ನಿರ್ದರಿಸಿದ್ವಿ . ಎಲ್ಲಾರಿಗೂ ಸರಳ ಆಗೋಹಂಗ, ಬರಿ ಚಿತ್ರ ನೋಡಿದ್ರ ಅರ್ಥ ಆಗೋಹಂಗ ನಮ್ಮ ಕಾರ್ಯಕರ್ತ ಪ್ರದೀಪ ಅವರು ಒಂದ ಸ್ಪೈರಲ್ ಚಿತ್ರದ ಅಜೆಂಡಾ ಮಾಡಿ ಕಳಸಿಬಿಟ್ಟಿದ್ರು.
ಆಮೇಲೆ ನಮ್ಮ ಬೆಂಕಿ ಬಸಣ್ಣ ಅವ್ರ ಆವಾಗವಾಗ FAQಗಳನ್ನ ಕಳಸ್ಕೊತನ ಇದ್ರ. ಅದರ ಪ್ರಕಾರ ನಮಗ ಅಂದ್ರ, ಕರ್ನಾಟಕದಲ್ಲಿರುವಂತೆ ಇಲ್ಲಿಯ ಕನ್ನಡ ಕೂಟದ ಹೆಣ್ಣ ಮಕ್ಕಳಿಗೇನ ಪುಕ್ಕಷಟ್ಟೆ ಸೀಟ್ ಇರ್ಲಿಲ್ಲ, ಮತ್ತ ಕಿಡಿಕ್ಯಾಗ ಹತ್ತಿ ಸೀಟು ಹಿಡಿಯೊಂಗಿಲ್ಲ , ಜಗ ಹಿಡಿಲಿಕ್ಕೆ ವಸ್ತ್ರನು ಹಾಕ್ಲಿಕ್ಕೆ ಬರೊ ಹಂಗಿರ್ಲಿಲ್ಲ. ಇನ್ನ ಏನೇನೊ ಇದ್ದು ಬಿಡ್ರಿ…ಹಿಂಗ ಅನ್ನೂದ್ರಾಗ ಬಂದ ಬಿಟ್ಟತ ನೋಡ್ರಿ ಪಿಕನಿಕ್ ಹೋಗೊ ವಾರ. ಮತ್ತ ಇನ್ನೊಮ್ಮೆ-ಮಗದೊಮ್ಮೆ ಮೀಟಿಂಗ್ ಮಾಡಿ ನಮ್ಮಅಧ್ಯಕ್ಷರಾದ ಸುನಿತ ರಟ್ಟೀಹಳ್ಳಿ ಎಲ್ಲಾರಿಗು ಒಂದೊಂದ ಜವಾಬ್ದಾರಿ ಕೊಟ್ರು. ಯಾರು ಅಡಗಿ ತರಬೇಕು, ಯಾರು ನೀರು, ಜೂಸು ತರಬೇಕು, ಹಿಂದೂ ದೇವಾಸ್ಥಾನದಿಂದ ಹೊರಡ ಬೇಕು ಇತ್ಯಾದಿ ಇತ್ಯಾದಿ… ಎಲ್ಲಾರಕಿಂತ ಮುಖ್ಯ ಪ್ರವಾಸದ ಖರ್ಚು-ವೆಚ್ಚದ ಲೆಕ್ಕ ಇಟ್ಕೊಳೊದ ಅಲ್ರಿಪಾ ಮತ್ತ. ನಮಗೇನ ಚಿಂತಿ ಇರಲಿಲ್ಲ, ನಮ್ಮ ಸಂಘದ ಖಜಾಂಚಿ ಲಲಿತ್ ಮೇಸ್ತಾ ಸರ್ ಎಲ್ಲ ಗಣಿತ ಮಾಡಿಬಿಟ್ಟಿದ್ರು.
ಬಸ್ ಟ್ರಿಪ್ ದಿನದ ಪ್ರಾರಂಭ / ಬಸ್ ನಲ್ಲಿ ಡಾನ್ಸ್ : ಇಷ್ಟೆಲ್ಲ ಉಸಾಬರಿ ಮಾಡುದ್ರಾಗ ಪ್ರವಾಸದ ದಿನ ಬಂದ ಬಿಟ್ಟಿತ. ನಾವು ಲಗೂನ ನಸೀಕ್ಲೆ ಎದ್ದ ಜಳಕ ಮಾಡಿ, ಹುಡುಗೂರ್ನ ತಯಾರ ಮಾಡಿ ೫.೪೫ ಅಂದ್ರ ಅಡಗಿ-ಊಟ-ಛಾ-ಫರಾಳ ವಟ್ಟ ಎಲ್ಲ ತರ್ಲಿಕ್ಕೆ ವಾಲೆಂಟಿಯರ್ಸ ನವೀನ ಮತ್ತ ಅಭಿಷೇಕ ಹೋಗಿ ಬರೋಬ್ಬರಿ ವೆಳ್ಯಕ ಹಿಂದೂ ಗುಡಿ ಹತ್ರ ಬಂದ್ರು. ಅಷ್ಟೋತ್ತಿಗೆ ಎಲ್ಲಾರು ಬಂದಿದ್ರು. ಬಸ್ ಮುಂದ ನಮ್ ಕನ್ನಡ ಸಂಘದ ಬ್ಯಾನರ್ ಹಿಡಕೊಂಡ ಫೋಟೋ ತಕ್ಕೊಂಡ ಮ್ಯಾಲೇ ಬಸ್ ಹತ್ತೊ ಕೆಲಸ ನಮ್ಮದ.
ಬಸ್-ಪ್ರವಾಸ ಅಂದ್ರ ಕೈಕಟ್ಟಿ ಬಾಯಿ ಮುಚ್ಕೊಂಡ ಕೂಡಂಗಿಲ್ಲ ನಾವು, ಅದಕ ಕಾರ್ಯಕರ್ತೆ ಉಮಾ ಶ್ರೀನಿವಾಸ ಅವರು ಅಂತ್ಯಾಕ್ಷರಿ ಶುರು ಮಾಡಿದ್ರು. ನಮ್ಮ ಅಂತ್ಯಾಕ್ಷರಿಗೊಳು ಹೆಂಗಿರ್ತಾವಂದ್ರ ಯಾರ ಯಾವ ಟೀಮನ್ಯಾಗಿದಾರಂತ ಗೊತ್ತಾಗಂಗಿಲ್ಲ, ವಟ್ಟ ಹಾಡುದ ಅಷ್ಟೇ!ಹಿಂಗ ನಾವ ಹಾಡುದ್ರಾಗ ಹಂಗ ಮದಲೇ ಬ್ರೇಕ್ ಬಂದ ಬಿಟ್ಟತ. ಮದಲ ನಕ್ಕಿ ಮಾಡಿದ ರೆಸ್ಟ ಏರಿಯಾದಾಗ ಬಸ್ ನಿಂತ ಮ್ಯಾಲೆಎಲ್ಲಾರು ಮುಂಜಾನಿ ನಾಶ್ತಾ - ಉಪ್ಪಿಟ್ಟು, ವಡಿ- ಚಟ್ನಿ ಶಿಸ್ತಂಗ ಹೊಡದ್ವಿ. ಚಮಚ ಇಲ್ಲದಕ್ಕ ಪಕ್ಕಾ ನಮ್ಮೂರಾಗ ತಿಂದಗಾತ. ನಾವಷ್ಟ ಯಾಕ ಈ ದೇಶದ್ದ ಡ್ರೈವರ ಜೋ ಸುದ ಕೈಲೇನ ತಿಂದ. ಛಾ ನಮಗಾದ್ರ, ಸಣ್ಣ ಹುಡುಗುರಿಗಂತ ನಮ್ಮ ಕಾರ್ಯಕರ್ತ ಶ್ರೀಕುಮಾರ ಅವರು ಜೂಸ್, ನೀರು ಅಲ್ದ ನಮ್ಮನ್ನು ಹಿಡಕೊಂಡ ಎಲ್ಲಾರಿಗು ಚಿಪ್ಸ ತಂದಿದ್ರು. ಶ್ರಿನಿವಾಸು ಮಂಗ ಮಾಡಿಕೊಟ್ಟ ತಿಂಡಿ ಕೈ ಚೀಪ್ಕೊಂಡ ತಿನ್ನು ಹಂಗ ಆಗಿತ್ತು.
ಅಷ್ಟ ಆಗುದ ತಡ, ಉಮ ಶ್ರೀನಿವಾಸ ಅವರು ಕೆಕೆಸಿಡಿ ಮ್ಯುಸಿಕ್ ಸಿಸ್ಟಮ್ ವಾಲಂಟಿಯರ್ಸ ಕಡಿಂದ ಬಸ್ಸ ವಳಗ ಇಡಸಿದ್ರು. ಇನ್ನೇನ ಕೇಳ್ತೀರಿ, ಬಸ್ಸ ಚಾಲು ಆದ ಕೂಡ್ಲೆ ಎಲ್ಲ ಡಾನ್ಸ ಹಾಡೆ ಹಾಕಿದ್ರು. ಮ್ಯುಸಿಕ್ ಸಿಸ್ಟಮ್ ಮತ್ತ ಡ್ರೈವರ ಅಷ್ಟ ಸೀಟ ಮ್ಯಾಲೆ ಇರಬೇಕೇನೊ ನಾವಂತು ವಟ್ಟ ಸೀಟ ಕಾಣಲಿಲ್ಲ ಆಮೇಲೆ, ಹಾಡ ಹಚ್ಚುದ ಅದ ಡಾನ್ಸ ಮಾಡೂದ ಅದ. ನಾನು ನಮ್ಮ ಮನಿಯವ್ರು ನವೀನ ಸುದ “ಚಂದ ಚಂದ ನನ್ ಹೆಂಡತಿ” ಹಾಡಿಗೆ ಸಲ್ಪ ಸ್ಟೆಪ್ ಹಾಕಿದ್ವಿ. ವಟ್ ಮಜಾನೋ ಮಜ. ಉಮಾ ಮತ್ತು ಬೆಂಕಿ ಬಸಣ್ಣ ಅವ್ರಿಗೂ ಚುಟು ಚುಟು ಅಂತ, ಬಿಡ್ರಿ, ನಮ್ಮ ಕಾರ್ಯಕರ್ತೆ ದೀಪ ಅಭಿಶೇಕ ಅವ್ರನಂತಿ ಹಿಡಿಲಿಕ ಶಕ್ಯಿಲ್ಲ,! ಬೆಂಕಿ ಬಸಣ್ಣ ಅವ್ರು ದೀಪಾಗ "ಬೆಸ್ಟ ಡಾನ್ಸರ" ಅವಾರ್ಡ್ ಕೊಟ್ರು ... ನಾವ್ ತಿಂದ ಉಪ್ಪಿಟ್ಟ 10 ಮಿನಿಟವಳಗ ಕರಗಿರಬೇಕೇನೊ! ಮ್ಯುಸಿಕ್ ಸಿಸ್ಟಮ್ ಟೆಸ್ಟ ಭಾರಿ ಜೋರಾಗೇ ಆತು ನಚಿಕೇತ, ವಿಹಾನ್, ನಿಹಾರಿಕ, ದಿಯ ಮತ್ತ ಸೌರವ ಪುಟಾಣಿಗಳಿಂದ. ನಾವಸುದ ಇಂಗ್ಲಿಷ್ ರೈಮ್ಸ ಹಾಡಕೋತ ಕುತಿದ್ವಿ ಅವ್ರ ಜೋಡಿ.ಆಮೇಲೆ ಗ್ಲಾ ಸ ಬ್ರೇಕಿಂಗ್ ಒಂದು ಶೋ, ಗ್ಲಾಸ ಮೇಕಿಂಗ ಶೋ, ಮಸ್ತ ಗ್ಯಾಲರಿ ಎಲ್ಲ ನೋಡಿ, ಎಲ್ಲರು ಶಾಪಿಂಗಗೆ ಹೋದ್ವಿ. ಶಾಪಿಂಗ ಅಂದ್ರ ಕೇಳಬ್ಯಾಡ್ರಿ, ಅದರ ಉಸಾಬರಿ ಬ್ಯಾಡ ಅಂದ್ರು ಮನಸ ತಡೀದೆ ಎನರೆ ತೊಗೊಂಡ ಬಿಡತೇವಿ. ಅಷ್ಟಕೊಟ್ಟ ವೆಳ್ಯದಾಗ, ಸಾಮಾನ ಖರೀದಿ ಮಾಡಿ ಹೊರಗ ಬಂದ್ವಿ. ಹಸಿವಿ ಆಗೋದ ತಡ ಊಟ ರೆಡಿ ಆಗಿ ಕಾಯಲಿಕತ್ತಿತ್ತು. ಅದೆ ಮಂಗ ಅವ್ರು ಮಾಡಿದ ಪುರುಳಿಯೋಗರೆ, ಮಸರನ್ನ ಅದರ ಜೋಡಿತಿನ್ಲಿಕ್ಕೆ ಚಿಪ್ಸ ಮತ್ತ ಉಪ್ಪಿನಕಾಯಿ. ಬಾಯಿಚಪ್ಪರಿಸಿ ತಿಂದ್ರ ಒಂದ ಹತ್ತ ಮಿನಿಟನ್ಯಾಗ ಪೂರ್ತಿ ಊಟನ ಖಾಲಿ.
ವೈನ- ಟೇಸ್ಟಿಂಗ್ :
ಮುಂದಿನ ಡೆಸ್ಟಿನೇಶನ್ ವೈನ- ಟೇಸ್ಟಿಂಗ್, ವೈನ ತೋಗೋಳೊರಿಗೆ ಇದು ಒಂದ ಸಂಭ್ರಮ. ಇಲ್ಲೆ ರವಿ ಅವರ ಬುಕ್ ಮಾಡಿಸಿದ್ರ. ಒಳಗ ಕುಡಿಲಿಕ್ಕೆ ಹೋದೊರ ಮಜ ಬೇರೆ ಆದ್ರ, ನಾವ ಹೊರಗಿದ್ದವ್ರ ಮಜ ಇನ್ನೊಂದ. ಅವರೆಲ್ಲ ಬರೂದ್ರಾಗ ನಾವ ಒಂದ ರೀಲ್‌ಮಾಡಿ, ಫೋಟೊ ಗೀಟೊ ಮುಗಸ್ಕೊಂಡ, ಒಂದ ವಾಕ್ ಸುದಾ ಮುಗಸಿದ್ವಿ. ಅಷ್ಟ್ರಾಗ ವೈನ ಟೇಸ್ಟ ಮಾಡ್ಲಿಕ್ಕ ಹೋದ 34 ದೋಸ್ತ್ರುಎಂಟ ಡಾಲರ್‌ಗೆ ಒಟ್ಟ ಆರ ತರದ ವೈನ್ಸ - ರೆಡ್, ವೈಟ್ ಮತ್ತ ಸ್ಥಳೀಯ ದ್ರಾಕ್ಷಿ ಹಣ್ಣಿಂದ ತಯಾರಾದ ಬ್ಯಾರೆ-ಬ್ಯಾರೆ ವೈನ ಕುಡದ್ರು. ಅಷ್ಟ ಅಲ್ಲ, ರವಿ ಅವರು ಬೇಕಾದವ್ರಿಗೆ ವೈನ್ ಬಾಟಲಿಗಳನ್ನ 20% ಡಿಸ್ಕೌಂಟಗೆ ಖರೀದಿನೂ ಮಾಡಲಿಕ್ಕೆ ಸಹಾಯ ಮಾಡಿದ್ರು.
ಟೆಘ್ಯನೆಕ್ ಫಾಲ್ಸ ಮತ್ತು ಕಾಯುಗಾ ಲೇಕ್ : ಅಲ್ಲಿಂದ ನಮ್ಮ ಮುಂದಿನ ಪ್ರವಾಸ ಟೆಘ್ಯನೆಕ್ ಫಾಲ್ಸ. ಒಂದ 2-2.5 ಮೈಲ ನಡೀಬೇಕಿತ್ತ ನೋಡ್ರಿ, ಅಂಥಾದ್ರಾಗು ವಟ್ಟ ನಮಗ ಫೋಟೋ, ರೀಲ ಮಾಡೋ ಹುಚ್ಚ ಭೈಂಕರ. ಕವಿತ ಅವರದ ಒಂದು ಜ಼ರಾ ಹಟಕೆ ಟೈಪ ನಡಗಿ ಅದ ಅಲ್ರಿ ಅದರ ರೀಲೆ ಮಾಡುದಾತ. ಮುಂದ ಹರಟಿ ಹಚ್ಚಕೊಂಡ ಫಾಲ್ಸ ತನ ಬಂದ್ವಿ, ನಮಕ್ಕಿಂತ ಮದಲ ಎಲ್ಲ ಸಣ್ಣ ಮಕ್ಕಳು ಮುಟ್ಟಿ ಆಡ್ಲಿಕತ್ತಿದ್ರುರಿ. ಫಾಲ್ಸ ಹತ್ರನು ನಾನಾ ನಮೂನಿ ಪೋಸ ಕೊಟ್ಟ ಫೋಟೊತೊಗೊಂಡ್ರರಿ. ಏನ ಛಂದ ಫಾಲ್ಸ ಇತ್ತು ಬಂದಿದಕ್ಕೂ ಸಾರ್ಥಕಾತ. ಅಲ್ಲಿಂದ ವಾಪಸ ಕಳಸ್ಲಿಕ್ಕೆ ಸೀಟಿನ ಹೊಡಿಯೋದಾತ ಕಡೀಕ.ಅಲ್ಲಿಂದ ಬಂದ ಕೂಡ್ಲೆ ಸಂಜಿ ತಿಂಡಿ ರೆಡಿ ಆಗಿ ಕಾಯ್ತಿತ್ತು. ಬಯಿಗೆ ಹಾಕ್ಕೊಂಡ್ರ ಸರ್ ಅಂತ ನೆತ್ತಿಗೆ ಹತ್ತೊಹಂಗ ಮಾಡಿದ ಮಸಾಲಿ ಗೊಂಜಾಳ, ನನ್ನ ಎಲ್ಲಾ ವೇಳ್ಯದ ಫೇವರೆಟ್ ಪಕೋಡಗೊಳ ಮತ್ತೇನ ಬೇಕ್ರಿ ? ನಾವಂತು ಮಸ್ತ ಕಟದ್ವಿ ಆದ್ರ ನಮ್ಮ ಬಿಳಿ ಡ್ರೈವರ ಜೋ ಅಂತು ಬೆಂಕಿ ಬಸಣ್ಣ ಸರ್ ಬಾಜು ನಿಂತ ಬೆಂಕಿಗತೆ ಮಾರಿ ಕೆಂಪೇರಿಸ್ಕೊಂಡ್ರು ಕೈ ಚೀಪಿ ಚೀಪಿ ತಿಂದ್ರ, ಏನಕೇಳ್ತೀರಿ…
ಮುಂದ ನಾವ ಸ್ವಲ್ಪ ನಡಕೋತ ಹೋದ್ವಿ, ಅಲ್ಲೇ ಕಾಯುಗಾ ಸರೋವರ(ಲೇಕ್) ಇತ್ತು. ಅದರ ಒಳಗ ಹೋಗಿ ಸ್ವಲ್ಪ ಆಡಿ, ಕೈಕಾಲು ತಂಪ ಮಾಡಕೊಂಡ ಬಂದ್ವಿ. ಶಿಸ್ತಂಗ ಹಾಡು, ಡ್ಯಾನ್ಸ ಮತ್ತ ಮಾತ ಆದಿಂದನ ಜಗ ಖಾಲಿಮಾಡಿ ಬಸ್ಸ ಹತ್ರ ಬಂದ್ವಿ. ವೆಳ್ಯನು ಆಗಿತ್ತು.ಅಲ್ಲಿಂದ ಹೊಂಟ ಸ್ವಲ್ಪ ಹೊತ್ತಿಗೆ ಇಥಾಕಾ ಊರಿನ ಡೌನ್ಟೌನ್ ದಾಗ ಊಟಕ್ಕಂತ ಬಸ್ಸ ನಿಲ್ಲಸಿದ್ರು, ಎಲ್ಲಾರು ಬ್ಯಾರ-ಬ್ಯಾರೆ ಕಡೆ ತಮಗ ಎಲ್ಲಿ ಏನು ಬೇಕೋ ತಿಂದ ಬಂದ್ರ. ಆಮೇಲೆ ಈ ಪರಿ ಸುಸ್ತ ಹೊಡದಿದ್ರರಿ ಎಲ್ಲಾರು, ಕೂತ ಕೂಡ್ಲೆ ಕೆಲು ಜನ ಗೊರಕಿನೆ. ನಮಗಂತು ಸುಡ್ಲಿ ನಿದ್ದಿ ಬರಂಗಿಲ್ಲ, ಸುಮ್ಮ ನಮ್ಮ ಅಲ್ಬನಿ ಹಿಂದೂ ಗುಡಿ ಬರೊತನ ಹಾಡ ಕೇಳ್ಕೋತ ಬಂದೆ.
ಮುಟ್ಟೋತನ ರಾತ್ರಿ ಸರ್ವತ್ತಾಗಿತ್ತು. ನವೀನ, ಶ್ರೀಕುಮಾರ, ಪ್ರದೀಪ, ಬೆಂಕಿ, ಮುರಳಿ ಮತ್ತ ನಾವಿನ್ನೊಂದಿಷ್ಟ ಮಂದಿ ಬಸ್ಸ ಒಳಗ, ಹೊರಗ ಸ್ವ ಚ್ಛಮಾಡಿ ಹೊಂಟ್ವಿ. ಒಟ್ಟನ್ಯಾಗ ಹೇಳ್ಬೇಕಂದ್ರ ಮುಂಜಾನಿಂದ ನಡರಾತ್ರಿ ತನ ಮಶ್ಕಿರಿ ಮಾಡಿ, ಶಾಪಿಂಗ ಚೀಲ ವಜ್ಜ ಹೊತ್ಕೊಂಡ, ಓಡ್ಯಾಡಿ, ಮಜಾಮಾಡಿ ಸುಸ್ತ ಹೊಡದ ಮಕ್ಕೊಂಡ ಮಕ್ಕಳ ಹೊತ್ಕೊಂಡ, ಇನ್ನ ಕೆಲವರ ಮತ್ತೊಬ್ರಿಗೂ ಮನಿ ಮುಟ್ಟಿಸಿ ತಮ್ಮಮನಿ ಮುಟ್ಟುತನ ಮದ್ಯ ರಾತ್ರಿ ಎರಡ ಗಂಟೆ ಹೊಡದ ಹೋಗಿತ್ತು. ಈ ಬಸ್ಸ ಟೂರು ತಾತ್ಕಾಲಿಕ ಆದ್ರು ನಮ್ಮ ಮನಸ್‌ನ್ಯಾಗ ಇನ್ನ ಅದರ ಅಷ್ಟ ಛಂದನ್ನಿ ನೆನಪಗಳು ಶಾಶ್ವತವಾಗಿ ಉಳದಾವರಿ. ಈ ಬಸ್ ಟ್ರಿಪ್ ನಿಂದಾಗಿ ಒಂದ್ ದಿನದ ಮಟ್ಟಿಗೆ ನಮ್ ಕಾಲೇಜ್ ಲೈಫ್ ನ ಅನುಭವ ಪಡೆದು ವಾಪಸು ಬಂದ್ವಿ..