

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಿಗೆ ಜ.8ರಿಂದ 12ರತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದ ತರುವಾಯ ಇದೀಗ ಜ.14 ರಿಂದ 21ರವರೆಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಸೋಮವಾರ ರಾತ್ರಿ ಮಹಾರಥೋತ್ಸವ ನೆರವೇರಿತು.
ಸೀಮೆಯ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ನೇತೃತ್ವದಲ್ಲಿ ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಉಪಸ್ಥಿತಿಯಲ್ಲಿ ಜಾತ್ರಾ ಮಹೋತ್ಸವಕ್ಕೆ ಮಕರ ಸಂಕ್ರಾಂತಿಯ ದಿನದಂದು ತೋರಣ ಮುಹೂರ್ತ, ಪುಣ್ಯಾಹ ವಾಚನ, ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಾಗಿತ್ತು.
ಸಂಜೆ ಭಜನೆ, ದೇವರ ಬಲಿ, ವಸಂತಕಟ್ಟೆ ಪೂಜೆಗಳು ನಡೆದವು. 15ರಂದು ದೇವಿಗೆ ಅಭಿಷೇಕ, ಅಲಂಕಾರ ಪೂಜೆ ನಡೆದರೆ ಸಂಜೆ ಸುಲ್ಕೇರಿ ಮೊಗ್ರು ಶ್ರೀ ಮಹಿಷ ಮರ್ದಿನಿ ಭಜನಾ ತಂಡದವರ ಕುಣಿತ ಭಜನೆಯೊಂದಿಗೆ ದೇವರ ಮೂಡು ಸವಾರಿ, ವಸಂತಕಟ್ಟೆ ಪೂಜೆ, ದೇವರ ಬಲಿ, ಮಹಾಪೂಜೆ ನಡೆದವು. 16ರಂದು ಅಭಿಷೇಕ, ಭಜನೆ ದೇವರ ಬಲಿ, ವಸಂತಕಟ್ಟೆ ಪೂಜೆ, ಬಳಂಜ ಬ್ರಹ್ಮಶ್ರೀ ಭಜನಾ ತಂಡದವರಿಂದ ಕುಣಿತ ಭಜನೆಯೊಂದಿಗೆ ದೇವಿಯ ಪಡುಸವಾರಿ, ಚಂದ್ರಮಂಡಲ ಉತ್ಸವ, ಮಹಾಪೂಜೆ, ನಿತ್ಯ ಬಲಿ ನಡೆದವು. 17ರಂದು ಅಭಿಷೇಕ, ಅಲಂಕಾರ ಪೂಜೆ, ಭಜನೆ, ದೇವರ ದರ್ಶನ ಬಲಿ, ವಸಂತ ಕಟ್ಟೆ ಪೂಜೆ, ಚಂದ್ರಮಂಡಲ ಉತ್ಸವ, ಮಹಾಪೂಜೆ, ನಿತ್ಯಬಲಿ ನಡೆದವು.
18ರಂದು ಅಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಧ್ವಜಪೂಜೆ, ಅನ್ನಸಂತರ್ಪಣೆ, ಭಜನೆ, ದೇವರ ದರ್ಶನ ಬಲಿ, ವಸಂತಕಟ್ಟೆ ಪೂಜೆ, ಚಂದ್ರಮಂಡಲ ಉತ್ಸವ, ಮಹಾಪೂಜೆ, ನಿತ್ಯಬಲಿ ನಡೆದವು. ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 19ರಂದು ಅಭಿಷೇಕ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಧ್ವಜ ಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ, ಶ್ರೀ ಮೂಜಿಲ್ನಾಯ ದೈವದ ನೇಮ ಹಾಗೂ ಪರಿವಾರ ದೈವಗಳ ನೇಮ, ಶ್ರೀ ಭೂತಬಲಿ, ಕವಾಟ ಬಂಧನ ನಡೆಯಿತು.
ಸೋಮವಾರ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಹರಿದಾಸ ಡೋಗ್ರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಅಳದಂಗಡಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸುಲ್ಕೇರಿಯ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲ, ಅರ್ಚಕ ಪ್ರಕಾಶ್ ಹೊಳ್ಳ ಉಪಸ್ಥಿತರಿದ್ದರು.
ದೈವ-ದೇವರ ಭೇಟಿ
ಸೋಮವಾರ ಪ್ರಾರ್ಥನೆ, ಕವಾಟೋದ್ಘಾಟನೆ, ದಿವ್ಯದರ್ಶನ, ಕಲಶಾಭಿಷೇಕ, ಅಲಂಕಾರ ಪೂಜೆ, ಚಂದ್ರಮಂಡಲ ಉತ್ಸವ, ಮಹಾಪೂಜೆ, ದೇವರ ಬಲಿ, ಹಣ್ಣುಕಾಯಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ, ದೇವರ ಮಹೋತ್ಸವ, ವಸಂತ ಕಟ್ಟೆಪೂಜೆ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಶ್ರೀ ಕೊಡಮಣಿತ್ತಾಯ ದೈವದ ನೇಮ, ದೈವ- ದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ ನೆರವೇರಿತು.