

ಮುಂಬೈ: ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋ ಯಾರು? ನಿಸ್ಸಂಶಯವಾಗಿ ಅಕ್ಷಯ್ ಕುಮಾರ್. ಈಗಾಗಲೇ ಅಕ್ಷಯ್ ಕುಮಾರ್ ಚಿತ್ರವೊಂದಕ್ಕೆ 100 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅದೀಗ ಇನ್ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: PHOTO GALLERY: ರಮೇಶ್ ಅರವಿಂದ್ ಮಗಳ ಮದುವೆ …
ಅಕ್ಷಯ್ ಕುಮಾರ್ ಕೈಯಲ್ಲಿ ಅದೆಷ್ಟು ಚಿತ್ರಗಳಿವೆ ಎಂದರೆ, ಮುಂದಿನ ವರ್ಷದ ಪೂರಾ ಅವರು ಬುಕ್ ಆಗಿದ್ದಾರೆ. ಈಗಾಗಲೇ ಅಕ್ಷಯ್ ಅಭಿನಯದ 'ಸೂರ್ಯವಂಶಿ' ಮತ್ತು 'ಬೆಲ್ಬಾಟಮ್' ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಇದಲ್ಲದೆ 'ಅತರಂಗಿ ರೇ', 'ಪೃಥ್ವಿರಾಜ್', 'ರಾಮ್ಸೇತು', 'ಮಿಷನ್ ಲಯನ್', 'ಬಚ್ಚನ್ ಪಾಂಡೆ' ಮತ್ತು 'ರಕ್ಷಾಬಂಧನ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳೆಲ್ಲಾ 2021 ಮುಗಿಯುವ ಹೊತ್ತಿಗೆ ಮುಗಿಯಲಿವೆ.
ಇನ್ನು 2022ರಲ್ಲಿ ಪ್ರಾರಂಭವಾಗುವ ಚಿತ್ರಗಳಿಗೂ ಈಗಲೇ ಕಥೆ ಕೇಳುತ್ತಿದ್ದಾರಂತೆ ಅಕ್ಷಯ್. ಈಗಾಗಲೇ ಕೆಲವು ಕಥೆಗಳನ್ನು ಅವರು ಇಷ್ಟಪಟ್ಟಿದ್ದು, ಆ ಚಿತ್ರಗಳಿಗೆ 2022ರಲ್ಲಿ ಡೇಟ್ಸ್ ಕೊಟ್ಟಿದ್ದಾರೆ. ಇನ್ನು ಪಟ್ಟಿಯಲ್ಲಿರುವ ಒಂದಿಷ್ಟು ಚಿತ್ರಗಳು ಬಿಡುಗಡೆಯಾದ ಮೇಲೆ, ಒಂದೊಂದೇ ಚಿತ್ರದ ಬಗ್ಗೆ ಅವರು ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.
2021ರಲ್ಲಿ ಚಿತ್ರೀಕರಣ ಮತ್ತು ಬಿಡುಗಡೆಯಾಗಲಿರುವ ಚಿತ್ರಗಳಿಗೆ ನೂರು ಕೋಟಿ ಸಂಭಾವನೆ ಪಡೆಯುತ್ತಿದ್ದ ಅಕ್ಷಯ್, 2022ರಲ್ಲಿ ಒಪ್ಪಿಕೊಳ್ಳಲಿರುವ ಚಿತ್ರಗಳಿಗೆ ಸಂಭಾವನೆ ಹೆಚ್ಚಿಸಿದ್ದಾರಂತೆ. ಮುಂದಿನ ದಿನಗಳಲ್ಲಿ ಅವರು ಒಂದು ಚಿತ್ರಕ್ಕೆ 135 ಕೋಟಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ಚಿತ್ರಕ್ಕೆ ಅಷ್ಟು ಪಡೆದರೆ ವರ್ಕೌಟ್ ಆಗುತ್ತದಾ? ಎಂಬ ಪ್ರಶ್ನೆ ಬರಬಹುದು. ಅದನ್ನೆಲ್ಲಾ ಲೆಕ್ಕ ಹಾಕಿಯೇ ಅವರು ಅಷ್ಟೊಂದು ಸಂಭಾವನೆ ಕೇಳುತ್ತಿದ್ದಾರಂತೆ. ಅಷ್ಟೇ ಅಲ್ಲ, ಅಕ್ಷಯ್ ಕೇಳಿದರೆ ಕೊಡುವುದಕ್ಕೆ ಅಡ್ಡಿಯಿಲ್ಲ ಎಂದು ನಿರ್ಮಾಪಕರು ಸಹ ಕೊಡುವುದಕ್ಕೆ ಮುಂದಾಗಿದ್ದಾರಂತೆ.