ಚರಂಡಿಯಲ್ಲಿ ಅಕ್ಷರ ದಾಸೋಹದ ಅನ್ನ!: ನಿರ್ಲಕ್ಷ್ಯದ ನಡೆಗೆ ಸಾರ್ವಜನಿಕರ ಆಕ್ರೋಶ

rice
ರಸ್ತೆ ಬದಿಯ ಚರಂಡಿಯಲ್ಲಿ ಅನ್ನ.
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಇಲ್ಲಿನ ಸರ್ಕಾರಿ ಮಾದರಿ ಶಾಲೆಯ ಬಳಿಯ ಚರಂಡಿಯಲ್ಲಿ ಶಾಲಾ ಅಕ್ಷರ ದಾಸೋಹದ ಅನ್ನ ಚೆಲ್ಲಿದ್ದು ಗಮನಕ್ಕೆ ಬಂದಿದ್ದು, ಮಕ್ಕಳಿಗೆ ಅನ್ನದ ಬಗೆಗಿನ ಕಾಳಜಿಯ ಶಿಕ್ಷಣ ನೀಡದ ಶಿಕ್ಷಕ ವೃಂದದ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಮಧ್ಯಾಹ್ನದ ಹಸಿವು ತಣಿಸಲು ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಬೆಳಗ್ಗೆ ಶಾಲೆಯಲ್ಲಿ ಹಾಜರಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನ್ನ ಸಿದ್ಧಪಡಿಸುವುದು ಶಾಲಾ ನಿಯಮ. ಬಹುತೇಕ ಶಾಲೆಗಳಲ್ಲಿ ಅದು ಸಹಜವಾಗಿ ನಡೆಯುತ್ತಿರುತ್ತದೆ. ಆದರೆ ಇಲ್ಲಿನ ಶಾಲೆಯ ಚರಂಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅನ್ನ ಕಾಣಿಸಿರುವುದು ಮಿಕ್ಕಿ ಉಳಿದ ಅನ್ನವನ್ನು ಚರಂಡಿಗೆ ಎಸೆಯಲಾಗುತ್ತಿದೆ ಎಂಬ ಶಂಕೆ ಮೂಡಿದೆ.

ಈ ಮಧ್ಯೆ ಕೆಲ ಮಕ್ಕಳು ಶಾಲೆಯಲ್ಲಿ ದೊರಕುವ ಬಿಸಿಯೂಟ ಹಿತವಾಗದ ಕಾರಣ ಮನೆಯಿಂದ ಬುತ್ತಿಯನ್ನು ತರುತ್ತಿದ್ದಾರೆಂಬ ಮಾಹಿತಿ ಲಭಿಸಿದ್ದು, ಹೀಗೆ ಮಕ್ಕಳಿಂದ ಸ್ವೀಕರಿಸಲ್ಪಡದ ಅನ್ನವನ್ನು ನೇರವಾಗಿ ಚರಂಡಿಗೆ ಎಸೆಯಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ದಿನಕ್ಕೆ ಎರಡು ಹೊತ್ತು ಅನ್ನ ನೀಡುತ್ತಿದ್ದ ಶಾಲೆ

187 ವರ್ಷಗಳ ಇತಿಹಾಸವಿರುವ ಈ ಮಾದರಿ ಶಾಲೆಯಲ್ಲಿ ಈ ಹಿಂದೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಬಿ.ಐತ್ತಪ್ಪ ನಾಯ್ಕ ರವರು ಮುಖ್ಯಶಿಕ್ಷಕರಾಗಿದ್ದ ವೇಳೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ಹಾಗೂ ಸಾಯಂಕಾಲ ಎರಡು ಹೊತ್ತು ಬಿಸಿಯೂಟ ಒದಗಿಸಲಾಗುತ್ತಿತ್ತು. ಆದಾಗ್ಯೂ ಅನ್ನ ಉಳಿಕೆಯಾದರೆ ಅದನ್ನು ಅವಶ್ಯಕತೆ ಇದ್ದವರು ಕೊಂಡೊಯ್ಯಲು ಅವಕಾಶ ಕಲ್ಪಿಸುತ್ತಿದ್ದರು. ಐತ್ತಪ್ಪ ನಾಯ್ಕ ಅವರ ನಿರ್ಗಮನದ ಬಳಿಕ ಸಮಾಜದ ಮುಖ್ಯವಾಹಿನಿಯಿಂದ ವಿಮುಖವಾಗುತ್ತಾ ಬಂದ ಈ ವಿದ್ಯಾಸಂಸ್ಥೆ ಸದ್ಯ ಅನ್ನಕ್ಕೆ ಅಗೌರವ ಸಲ್ಲಿಸಿದ ಅಪಾದನೆಗೆ ತುತ್ತಾಗಿರುವುದು ವಿದ್ಯಾಭಿಮಾನಿಗಳ ಮನವನ್ನು ನೋಯಿಸಿದೆ.

ತ್ಯಾಜ್ಯ ಸಂಗ್ರಹಣ ವ್ಯವಸ್ಥೆ ಇದ್ದಾಗ್ಯೂ ಶಾಲೆಯಲ್ಲಿ ಹಸಿ ಕಸ ಸಂಗ್ರಹಣೆಯಲ್ಲಿ ಮಕ್ಕಳ ತಟ್ಟೆಯಲ್ಲಿ ಉಳಿಕೆಯಾದ ಅನ್ನವನ್ನು ಒಂದು ಡಬ್ಬದಲ್ಲಿ ಸಂಗ್ರಹಿಸಿ ಬಳಿಕ ತಟ್ಟೆ ತೊಳೆಯಲು ಮಕ್ಕಳಿಗೆ ಶಿಕ್ಷಣ ನೀಡಿದಂತೆ ಕಾಣುತ್ತಿಲ್ಲ. ಸಾರ್ವಜನಿಕ ಚರಂಡಿಗೆ ಅನ್ನ ಎಸೆಯಬೇಡಿ ಎಂದು, ತ್ಯಾಜ್ಯ ನೀರು ಸಂಗ್ರಹಣೆಗೆ ಇಂಗು ಗುಂಡಿ ನಿರ್ಮಿಸಿರೆಂದು ಕಳೆದ ಒಂದುವರೆ ವರ್ಷದಿಂದ ಸತತ ಮನವಿ ಮಾಡುತ್ತಿದ್ದರೂ ಶಾಲಾಡಳಿತದಿಂದ ಸ್ಪಂದನೆಯಿಲ್ಲ. ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕರ ತಪ್ಪಿನಿಂದಾಗಿ ಚರಂಡಿಯಲ್ಲಿ ಅನ್ನ ಎಸೆಯಲ್ಪಡುತ್ತಿದೆ. - ವಿಲ್ಪ್ರೇಡ್ ಲಾರೆನ್ಸ್ ರೋಡ್ರಿಗಸ್, ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಾರೋಗ್ಯಕ್ಕೀಡಾದ ಕೆಲ ಮಕ್ಕಳು ಮಾತ್ರ ಮನೆಯಿಂದಲೇ ಮಧ್ಯಾಹ್ನದ ಊಟವನ್ನು ತರುತ್ತಿರುವುದು ಬಿಟ್ಟರೆ, ಉಳಿದೆಲ್ಲಾ ಮಕ್ಕಳು, ಶಿಕ್ಷಕರು ಶಾಲೆಯ ಬಿಸಿಯೂಟವನ್ನೇ ಸೇವಿಸುತ್ತಿದ್ದಾರೆ. ಮಕ್ಕಳು ಬಟ್ಟಲು ತೊಳೆಯುವಾಗ ಅದರಲ್ಲಿದ್ದ ಒಂದೆರಡು ಅನ್ನದ ಕಾಳು ನೀರಿನೊಂದಿಗೆ ಚರಂಡಿಗೆ ಹೋಗಿರಬಹುದೇ ವಿನಃ ನಾವು ಅನ್ನವನ್ನು ಚರಂಡಿಗೆ ಎಸೆದಿಲ್ಲ. ದೊಡ್ಡ ಪ್ರಮಾಣದಲ್ಲಿ ಅನ್ನ ಕಾಣಿಸಿಕೊಂಡಿರುವುದರ ಹಿಂದೆ ಶಾಲೆಗೆ ಕೆಟ್ಟ ಹೆಸರು ತರಿಸುವ ಹುನ್ನಾರವಿದ್ದಂತೆ ಕಾಣಿಸುತ್ತಿದೆ. - ಹನುಮಂತಯ್ಯ, ಶಾಲಾ ಮುಖ್ಯಶಿಕ್ಷಕ https://www.vijayavani.net/shrinivas-v-v-runner-up https://www.vijayavani.net/heavy-vehicle-not-allowed

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net