ಸೋರುತ್ತಿದೆ ಅಕ್ಷರ ದಾಸೋಹ ಕೊಠಡಿ

kadaba
Published on

ಪ್ರವೀಣ್‌ರಾಜ್ ಕೊಲ ಕಡಬ

ಸೋರುತ್ತಿರುವ ಅಕ್ಷರ ದಾಸೋಹ ಅಡುಗೆ ಕೊಠಡಿಯಲ್ಲಿ ಶಾಲಾ ಮಕ್ಕಳಿಗೆ ಅಡುಗೆ ತಯಾರಿಸಿಕೊಡಬೇಕಾದ ಪರಿಸ್ಥಿತಿ ಕಡಬ ತಾಲೂಕಿನ ಪಾಲ್ತಾಡಿ ಸ.ಹಿ.ಪ್ರಾ.ಶಾಲೆಯದ್ದು. 4 ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದ್ದರೂ, ಅಧಿಕಾರಿಗಳು ಇತ್ತ ಗಮನವೇ ಹರಿಸಿಲ್ಲ.
ಈ ಕುರಿತು ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಹಾಗೂ ಪಾಲಕರು 4 ವರ್ಷಗಳಿಂದ ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಬಂದಿದ್ದಾರೆ. ಸವಣೂರು ಗ್ರಾಪಂ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿದ್ದು ಬಿಟ್ಟರೆ, ಬೇರಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ.

ಗ್ರಾಮಸಭೆಯಲ್ಲಿ ಚರ್ಚೆ: ಶಾಲೆ ಅಕ್ಷರ ದಾಸೋಹ ಕೊಠಡಿ ಸಮಸ್ಯೆ ಕುರಿತು ಸವಣೂರು ಗ್ರಾಮಸಭೆಯಲ್ಲಿ ಭಾರಿ ಚರ್ಚೆ ನಡೆದಿದೆ. ಈ ಕುರಿತು ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ವೇಳೆ ಮಾಹಿತಿ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರತಿನಿಧಿ ಗ್ರಾಮಸಭೆಗೆ ಮಾಹಿತಿ ನೀಡಿದ್ದರು. ಆದರೆ ಈವರೆಗೂ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿಲ್ಲ ಎನ್ನುವ ಆರೋಪವಿದೆ.

ದಾನಿಗಳ ನೆರವು: ಶಾಲೆ ಅಭಿವೃದ್ಧಿ ದೃಷ್ಟಿಯಿಂದ ಶಾಲಾಭಿವೃದ್ದಿ ಸಮಿತಿ ವತಿಯಿಂದ ದಾನಿಗಳ ನೆರವಿನಲ್ಲಿ ವಿವಿಧ ಚಟುವಟಿಕೆ, ಅಭಿವೃದ್ಧಿ ಕೆಲಸ, ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವ್ಯವಸ್ಥೆ ಮಾಡಲಾಗಿದೆ.

ಪ್ರತಿಭಟನೆ ಎಚ್ಚರಿಕೆ: ಶಾಲೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪೂರಕವಾಗಿ ಸ್ಪಂದಿಸದಿದ್ದರೆ ಮಕ್ಕಳ ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳು ಜಂಟಿಯಾಗಿ ಪ್ರತಿಭಟನೆ ನಡೆಸುವ ಕುರಿತೂ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.

ಶಾಲೆಯ ಅಕ್ಷರ ದಾಸೋಹ ಕೊಠಡಿ ಕಳೆದ 4 ವರ್ಷಗಳಿಂದ ಸೋರುತ್ತಿದ್ದು, ಟರ್ಪಾಲು ಹಾಕಲಾಗಿದೆ. ಹಲವು ಬಾರಿ ಇಲಾಖೆಗೆ ಬರೆಯಲಾಗಿದೆ. ಶಾಲೆ ಸಮಸ್ಯೆ ಗಂಭೀರವಾಗಿದ್ದರೂ ಶಿಕ್ಷಣಾಧಿಕಾರಿ ಈವರೆಗೂ ಭೇಟಿ ನೀಡಿಲ್ಲ. ಅಧಿಕಾರಿಗಳಿಗೆ ಶಾಲೆ ಬಗ್ಗೆ ಯಾಕೆ ಅಸಡ್ಡೆ ಎಂದು ಅರ್ಥವಾಗುತ್ತಿಲ್ಲ.- ಜಯರಾಮ ಗೌಡ ದೊಡ್ಡಮನೆ, ಅಧ್ಯಕ್ಷ, ಶಾಲಾಭಿವೃದ್ದಿ ಸಮಿತಿ ಪಾಲ್ತಾಡಿ ಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net