ಯುಪಿ ಸಿಎಂ ಯೋಗಿ ಆದಿತ್ಯಾನಾಥ್​ಗೆ ಎಸ್​ಪಿ ಶಾಸಕಿ ಶಭಾಶ್​; ನಂತರ ಪಕ್ಷದಿಂದ ಗೇಟ್​ ಪಾಸ್​​ |Pooja Pal

Pooja Pal
Published on

Pooja Pal: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ರ ಸಹಿಷ್ಣುತೆ ನೀತಿಗಳನ್ನು ಸಾರ್ವಜನಿಕವಾಗಿ ಶ್ಲಾಘಿಸಿದ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟಿಸಲಾಗಿದೆ.

ಪ್ರಯಾಗ್‌ರಾಜ್‌ನಲ್ಲಿ ಸಿಎಂ ತೆಗೆದುಕೊಂಡಿರುವ ಕ್ರಮಗಳು ಮಹಿಳೆಯರಿಗೆ ಅನುಕೂಲಕರವಾಗಿದ್ದು, ತನ್ನ ಗಂಡನನ್ನು ಕೊಂದ ಅತಿಕ್ ಅಹ್ಮದ್‌ನಂತಹ ಅಪರಾಧಿಗಳ ವಿರುದ್ಧ ಅವರು ಕ್ರಮ ಕೈಗೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೇರೆ ಯಾರೂ ನನ್ನ ಮಾತನ್ನು ಕೇಳದಿದ್ದಾಗ ನನಗೆ ಮುಖ್ಯಮಂತ್ರಿಗಳು ನ್ಯಾಯ ನೀಡಿದ್ದಾರೆ ಅದಕ್ಕಾಗಿ ಅವರಿಗೆ ಧನ್ಯವಾಧಗಳನ್ನು ತಿಳಿಸುತ್ತೇನೆ ಎಂದಿದ್ದರು.

ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಗಂಭೀರ ಅಶಿಸ್ತಿನ ಕಾರಣ ನೀಡಿ ಅಧಿಕೃತವಾಗಿ ಉಚ್ಚಾಟನೆ ಮಾಡಿದೆ. ಅನೇಕ ಸಲ ಎಚ್ಚರಿಕೆ ನೀಡಿದ ಹೊರತಾಗಿಯೂ, ಪೂಜಾ ಪಾಲ್ ತಮ್ಮ ಚಟುವಟಿಕೆಗಳನ್ನು ನಿಲ್ಲಿಸದ ಕಾರಣ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದ್ದು, ಇನ್ನು ಮುಂದೆ ಪಕ್ಷದ ಯಾವುದೇ ಕಾರ್ಯಕ್ರಮಗಳು ಅಥವಾ ಸಭೆಗಳಿಗೆ ಆಹ್ವಾನಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಏನಿದು ಘಟನೆ..?

ಪೂಜಾ ಈ ಹಿಂದೆ ಶಾಸಕರಾಗಿದ್ದ ರಾಜು ಪಾಲ್ ಅವರ ಪತ್ನಿ. 2005 ಜನವರಿ 15 ರಂದು ರಾಜು ಪಾಲ್ ಅವರನ್ನು ಪೂಜಾ ಪಾಲ್ ವಿವಾಹವಾದರು. ಮದುವೆಯಾದ ಕೇವಲ 10 ದಿನಗಳಲ್ಲಿ ಅವರ ಪತಿಯನ್ನು ಕೊಲೆ ಮಾಡಲಾಯಿತು. ಮಾಫಿಯಾ ಡಾನ್ ಅತಿಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ.

ಬಂಧನದಲ್ಲಿದ್ದ ಅತಿಕ್​​ ಮತ್ತು ಅಶ್ರಫ್​​ರನ್ನು ಏಪ್ರಿಲ್ 2023 ರಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಪ್ರಯಾಗ್‌ರಾಜ್‌ನ ಕೊಲ್ವಿನ್ ಆಸ್ಪತ್ರೆಗೆ ಕರೆದೊಯ್ಯುವಾಗ, ಪತ್ರಕರ್ತರಂತೆ ನಟಿಸಿದ ಮೂವರು ಅಪರಿಚಿತ ದುಷ್ಕರ್ಮಿಗಳು ಸುಮಾರು 20 ಗುಂಡುಗಳನ್ನು ಹಾರಿಸಿ ಕೊಲೆ ಮಾಡಿದರು ಎಂದು ತಿಳಿದುಬಂದಿದೆ.

ಪೂಜಾ ಪಾಲ್​ ಹೇಳಿದ್ದೇನು..?

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕಿ ಪೂಜಾ ಪಾಲ್, ಪ್ರಯಾಗ್‌ರಾಜ್‌ನಲ್ಲಿ ನನಗಿಂತ ಹೆಚ್ಚು ಚಿಂತಿತರಾಗಿದ್ದ ಮಹಿಳೆಯರ ಧ್ವನಿಯನ್ನು ನೀವು ಕೇಳಲು ಸಾಧ್ಯವಾಗದಿರಬಹುದು. ಆದರೆ ನಾನು ಅವರ ಧ್ವನಿಯಾಗಿದ್ದೇನೆ, ಪ್ರೀತಿಪಾತ್ರರನ್ನು ಕಳೆದುಕೊಂಡ ತಾಯಂದಿರು ಮತ್ತು ಸಹೋದರಿಯರಿಗಾಗಿ ಮಾತನಾಡಲು ತಾನು ಆಯ್ಕೆಯಾಗಿದ್ದೇನೆ ಎಂದರು. ನನ್ನನ್ನು ಸೇರಿದಂತೆ ಅತಿಕ್ ಅಹ್ಮದ್‌ನಿಂದ ಅನ್ಯಾಯಕ್ಕೊಳಗಾದ ಎಲ್ಲರಿಗೂ ಮುಖ್ಯಮಂತ್ರಿಗಳು ನ್ಯಾಯ ಒದಗಿಸಿದ್ದಾರೆ ಎಂದರು.

ನಾನು ಅನೇಕ ಬಾರಿ ಈ ವಿಷಯವಾಗಿ ಮಾತನಾಡುತ್ತಿದ್ದು, ಇಂದಿಗೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ಮೊದಲು ಸಂತ್ರಸ್ತೆ, ನಂತರ ಶಾಸಕಿ, ನಮ್ಮ ಜೀವನದಲ್ಲಿ ಸಂಭವಿಸಿದ ಘಟನೆಯನ್ನು ನಮಗೆ ಸಹಿಸಲು ಸಾಧ್ಯವಾಗಲಿಲ್ಲ ಎಂದರು.

ನಾನು ಕೂಡ ಹಿಂದುಳಿದ ಸಮುದಾಯಕ್ಕೆ ಸೇರಿದವಳಾಗಿದ್ದು, ನನ್ನ ಗಂಡನನ್ನು ಹಾಡಹಗಲೇ ಕೊಂದ ನಂತರ, ನಾನು ನನ್ನ ಮನೆಯಿಂದ ಹೊರಬಂದು ಅನ್ಯಾಯದ ವಿರುದ್ಧ ಧ್ವನಿ ಎತ್ತಿದೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net