

Rohit Sharma: ನಿನ್ನೆ (ಮೇ.02) ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 100 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ರೋಹಿತ್, ಐಪಿಎಲ್ ದಾಖಲೆಗಳಿಗೆ ಸಾಕ್ಷಿಯಾದರು.
36 ಎಸೆತಗಳಲ್ಲಿ 53 ರನ್ ಬಾರಿಸಿದ ರೋಹಿತ್, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ 231 ಪಂದ್ಯಗಳನ್ನಾಡಿ 6024 ರನ್ ಕಲೆಹಾಕಿದ್ದಾರೆ. ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ನಂತರ 6000 ರನ್ ಗಡಿದಾಟಿದ ಎರಡನೇ ಆಟಗಾರನಾಗಿ ರೋಹಿತ್ ಹೊರಹೊಮ್ಮಿದ್ದಾರೆ. ಇನ್ನು ಪಂದ್ಯ ಗೆದ್ದ ಬಳಿಕ ಪೆವಿಲಿಯನ್ನತ್ತ ಸಾಗುತ್ತಿದ್ದ ರೋಹಿತ್ರನ್ನು ಕೈಮುಗಿದು ಮಾತನಾಡಿಸಿದ ರಾಜಸ್ಥಾನ್ ರಾಯಲ್ಸ್ ವೇಗಿ ಆಕಾಶ್ ಮಧ್ವಾಲ್, ಸ್ಟ್ಯಾಂಡ್ಸ್ನಲ್ಲಿ ಕುಳಿತಿದ್ದ ರೋಹಿತ್ ಪತ್ನಿ ರಿತಿಕಾ ಸಜ್ದೇ ಅವರಿಗೂ ಕೈಮುಗಿದು ಮಾತನಾಡಿಸಿದರು. ಈ ದೃಶ್ಯ ನೋಡುಗರ ಮನ ಮುಟ್ಟಿದ್ದು, ಹಿರಿಯ ಕ್ರಿಕೆಟಿಗನ ಮೇಲೆ ಯುವ ಆಟಗಾರ ಇಟ್ಟಿರುವ ಗೌರವಕ್ಕೆ ಹರ್ಷ ವ್ಯಕ್ತವಾಗಿದೆ.
2023ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಮಧ್ವಾಲ್, ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ನಂತರದಲ್ಲಿ ಆರ್ಆರ್ ತಂಡಕ್ಕೆ ಸೇರ್ಪಡೆಗೊಂಡರು. ಈ ಸೀಸನ್ ಆರಂಭದಲ್ಲಿ ರಾಜಸ್ಥಾನ ಪರ ಕಾಣಿಸಿಕೊಂಡ ಮಧ್ವಾಲ್, ಮುಂಬೈ ವಿರುದ್ಧದ ಪಂದ್ಯದಲ್ಲಿ ಕುಳಿತಿದ್ದರು. ಈ ವೇಳೆ ರೋಹಿತ್ರನ್ನು ಕಂಡ ಕ್ಷಣವೇ ಗೌರವದಿಂದ ಎದ್ದು, ತಮ್ಮ ಮಾಜಿ ಕ್ಯಾಪ್ಟನ್ಗೆ ಕೈಮುಗಿದು ಮಾತನಾಡಿಸಿದ ದೃಶ್ಯ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯ ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದೆ.