

AK-47 : ಭಾನುವಾರ (ಸೆ.21) ಭಾರತ ವಿರುದ್ಧ ನಡೆದ ಸೂಪರ್-4 ಪಂದ್ಯದಲ್ಲಿ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಂತರ ಸಾಹಿಬ್ ಜಾದಾ ಫರ್ಹಾನ್ ಎಕೆ-47 ಬಂದೂಕಿನಂತೆ ತನ್ನ ಬ್ಯಾಟ್ ಅನ್ನು ಎತ್ತಿ ಸ್ಫೋಟಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲಡೆ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಐಸಿಸಿ ಎದುರು ಸಾಹಿಬ್ಜಾದಾ ಫರ್ಹಾನ್ ಈ ಸ್ಪಷ್ಟನೆ ಕೊಟ್ಟಿದ್ದಾರೆ.
ಶುಕ್ರವಾರ(ಸೆ.26) ನಡೆದ ಐಸಿಸಿ ವಿಚಾರಣೆಯಲ್ಲಿ ಅವರು ಯಾವುದೇ ರಾಜಕೀಯ ಸಂದೇಶವನ್ನು ನೀಡುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಭಾರತದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಹಾಗೂ ಪಠಾಣ್ ಆಚರಣೆಗಳ ಸಮಯದಲ್ಲಿ ಇದೇ ರೀತಿಯ ಬಂದೂಕಿನಂತಹ ಸನ್ನೆಗಳನ್ನು ಬಳಸಿದ್ದರು. ಇಂತಹ ಸನ್ನೆಗಳು ಅವರ ಪ್ರದೇಶದ ಸಾಂಸ್ಕೃತಿಕ ಅಭಿವ್ಯಕ್ತಿಗಳ ಭಾಗವಾಗಿದೆ. ಅಲ್ಲದೆ, ಮದುವೆಗಳು ಸೇರಿದಂತೆ ಸಂತೋಷದಾಯಕ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಫರ್ಹಾನ್ ಹೇಳಿದರು.
ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ಅವರ ಪ್ರಚೋದನಕಾರಿ ಸನ್ನೆಗಳಿಗಾಗಿ ಭಾರತ ಐಸಿಸಿಗೆ ಅಧಿಕೃತ ದೂರು ಸಲ್ಲಿಸಿದ ನಂತರ ಅವರು ವಿಚಾರಣೆಗೆ ಹಾಜರಿದ್ದರು.
ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರವನ್ನು ಪ್ರಸ್ತಾಪಿಸಿ ಕ್ರೀಡೆಯನ್ನು ರಾಜಕೀಯಗೊಳಿಸಬೇಡಿ ಎಂದು ಬೊಬ್ಬೆ ಹೊಡೆಯುವ ಪಾಕಿಸ್ತಾನ ತನ್ನ ನರಿಬುದ್ದಿಯನ್ನು ಮಾತ್ರ ಬಿಟ್ಟಿಲ್ಲ. ಹೇಳುವುದು ವೇದಾಂತ ತಿನ್ನುವುದು ಬದನೇಕಾಯಿ ಎಂಬಂತೆ ಪಾಕಿಸ್ತಾನ ನಡೆದುಕೊಳ್ಳುತ್ತಿದೆ. ಪಾಕ್ ಹಿರಿಯ ಆಟಗಾರರು ಕ್ರೀಡೆಯನ್ನು ರಾಜಕೀಯಗೊಳಿಸಬೇಡಿ ಎನ್ನುತ್ತಾರೆ. ಆದರೆ, ಅದೇ ಪಾಕ್ ಆಟಗಾರರು ಮೈದಾನದಲ್ಲಿ ಪ್ರಚೋದನಾಕಾರಿ ಸನ್ನೆಗಳನ್ನು ಮಾಡುತ್ತಾರೆ. ಈ ಒಂದು ನಡೆ ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. (ಏಜೆನ್ಸೀಸ್)