

ಔರಂಗಾಬಾದ್: ಕೊವಿಡ್-19 ನಿರ್ಬಂಧದ ನಡುವೆಯೂ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊವಿಡ್-19 ಪ್ರಮಾಣ ಹೆಚ್ಚಿರುವುದರಿಂದ ಧಾರ್ಮಿಕ ಸ್ಥಳಗಳನ್ನೂ ಇನ್ನೂ ತೆರೆದಿಲ್ಲ. ಹೀಗಿರುವಾಗಲೂ ಈ ಸಂಸದ ಮಸೀದಿಗೆ ಹೊರಟಿದ್ದರು.
ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಕೇಂದ್ರಗಳ ಬಾಗಿಲನ್ನು ತೆರೆಯಲು ಸರ್ಕಾರ ಮುಂದಾಗದಿದ್ದರೆ, ನಾನು ಖಂಡಿತ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಕಳೆದವಾರ ಜಲೀಲ್ ಹೇಳಿದ್ದರು.
ಅದರಂತೆಯೇ ಇಂದು ಶಹಗಂಜ್ ಮಸೀದಿಗೆ ತೆರಳುತ್ತಿರುವಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇಷ್ಟಾದರೂ ಜಲೀಲ್ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ. ಶೀಘ್ರವೇ ಮಸೀದಿಗಳನ್ನು ತೆರೆಯುವ ನಿರ್ಧಾರ ಮಾಡದಿದ್ದರೆ ರಾಜ್ಯಾದ್ಯಂತ ಇದೇ ನಡೆಯುತ್ತದೆ. ಎಲ್ಲರೂ ಮಸೀದಿಗಳಿಗೆ ಹೋಗುತ್ತಾರೆ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಹುಟ್ಟಿದ ದಿನವೇ ಆತ್ಮಹತ್ಯೆ ಮಾಡಿಕೊಂಡ ಯುವತಿ; ಅದಕ್ಕೂ ಮೊದಲು ನಡೆದಿತ್ತು ಅಕ್ಕನೊಂದಿಗೆ ಜಗಳ
ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಜಲೀಲ್, ಪ್ರಸಿದ್ಧ ಖಡ್ಕೇಶ್ವರ್ ದೇವಸ್ಥಾನಕ್ಕೂ ನಾನು ಹೋಗುತ್ತೇನೆ. ಶೀಘ್ರವೇ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ದೇಗುಲ ಆಡಳಿತಕ್ಕೆ ಜ್ಞಾಪನ ಪತ್ರ ನೀಡುತ್ತೇನೆ ಎಂದಿದ್ದರು. ಆದರೆ ಜಲೀಲ್ ಹೇಳಿಕೆಯಿಂದ ಶಿವಸೇನೆ ನಾಯಕರು ಕುಪಿತಗೊಂಡಿದ್ದರು. ಶಿವಸೇನೆ ಮತ್ತು ಎಐಎಂಐಎಂ ಕಾರ್ಯಕರ್ತರ ನಡುವೆ ಘರ್ಷಣೆ ಕೂಡ ಆಗಿತ್ತು.(ಏಜೆನ್ಸೀಸ್)