ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ

h16-Udyog Mela 1
Published on

ಹುಬ್ಬಳ್ಳಿ: ದೇಶದ 45 ಭಾಗಗಳಲ್ಲಿ ರೋಜಗಾರ್ ಮೇಳವನ್ನು ಆಯೋಜಿಸಲಾಗಿದೆ. ಈ ಮೂಲಕ ದೇಶಾದ್ಯಂತ 71,206 ಯುವಜನತೆಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದ್ದಾರೆ. ದೇಶದ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿ ಅವಶ್ಯಕವಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಯುಷ್ ಇಲಾಖೆಯ ಸಚಿವ ಡಾ. ಮುಂಜಪರಾ ಮಹೇಂದ್ರಭಾಯ್ ಕಲುಭಾಯ್ ಹೇಳಿದರು.

ಅಂಚೆ ಇಲಾಖೆ, ಗೃಹ ಇಲಾಖೆ, ರೈಲ್ವೆ ಇಲಾಖೆ, ನಿಮ್ಹಾನ್ಸ್ ಹಾಗೂ ಕಾರ್ವಿುಕ ಮತ್ತು ಉದ್ಯೋಗ ಮಂತ್ರಾಲಯ ಸಹಯೋಗದಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ 5ನೇ ರಾಷ್ಟಮಟ್ಟದ ರೋಜಗಾರ್ ಮೇಳದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ರೋಜಗಾರ್ ಮೇಳವನ್ನು ಆಯೋಜನೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಅಂಚೆ ಹಾಗೂ ರೈಲ್ವೆ ಇಲಾಖೆಯ 201 ಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

ಹೊಸದಾಗಿ ನೇಮಕಾತಿ ಹೊಂದಿದ ರೈಲ್ವೆ ಇಲಾಖೆಯ ಅಂಕಿತಾ ಕುಮಾರಿ, ಅಂಚೆ ಇಲಾಖೆಯ ಚಂದನಾ ನಾಯ್ಕ, ಸೈಯ್ಯದ್ ಫತೇಷಾವಲಿ ಬೇಪಾರಿ ಸೇರಿದಂತೆ ಇತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಅಂಚೆ ಇಲಾಖೆ, ರೈಲ್ವೆ ಇಲಾಖೆಗಳಲ್ಲಿ ಹೊಸದಾಗಿ ಆಯ್ಕೆಯಾದ 25 ಉದ್ಯೋಗಿಗಳಿಗೆ ಸಾಂಕೇತಿಕವಾಗಿ ಉದ್ಯೋಗ ಪತ್ರಗಳನ್ನು ವಿತರಿಸಲಾಯಿತು. 5ನೇ ರಾಷ್ಟಮಟ್ಟದ ರೋಜಗಾರ್ ಮೇಳಕ್ಕೆ ಆನ್​ಲೈನ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.

ರೈಲ್ವೆ ಇಲಾಖೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷಕುಮಾರ ವರ್ವ, ಅಂಚೆ ಇಲಾಖೆಯ ಸುಶೀಲಕುಮಾರ, ಅಂಚೆ ಇಲಾಖೆ, ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net