ಅಭಿಮಾನಿಗಳಿಗೆ ಮೋಸ ಮಾಡ್ತಿದ್ದೀಯಾ.. ಗೆಳೆಯರನ್ನು ತಂಡಕ್ಕೆ ತುಂಬಿದ್ದೀಯಾ: ಬಾಬರ್ ಮೇಲೆ ಶಹಜಾದ್ ಕೆಂಡಾಮಂಡಲ

pak
Published on

ಇಸ್ಲಾಮಾಬಾದ್​: ಟಿ-20ವಿಶ್ವಕಪ್​ನಲ್ಲಿ ಪಾಕಿಸ್ತಾನ 2 ಮ್ಯಾಚ್​ ಸೋತು ಒಂದರಲ್ಲಿ ಗೆದ್ದಿದೆ. ಕೆನಡಾವನ್ನು ಸೋಲಿಸಿದ ನಂತರ 'ಸೂಪರ್-8' ರೇಸ್‌ನಲ್ಲಿ ಮುಂದುವರಿದಿದೆ. ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಬಗ್ಗೆ ಟೀಕೆಗಳು ಕೇಳಿ ಬಂದಿರುವುದು ಗೊತ್ತೇ ಇದೆ.

ಉತ್ತಮ ಪ್ರದರ್ಶನದ ಹೊರತಾಗಿಯೂ, ಯುಎಸ್ಎ ವಿರುದ್ಧ ತಂಡ ಸೋಲು ಕಂಡಿತು. ಬಹುನಿರೀಕ್ಷಿತ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕ್​ ತಂಡ ಸಣ್ಣ ಗುರಿ ತಲುಪಲು ವಿಫಲವಾಯಿತು. ಇದು ತಂಡದ ವಿರುದ್ಧ ತೀವ್ರ ಟೀಕೆಗೆ ಕಾರಣವಾಗಿದೆ.

ಪ್ರಮುಖವಾಗಿ ಹಿರಿಯ ಕ್ರಿಕೆಟಿಗ ಅಹ್ಮದ್ ಶೆಹಜಾದ್ ನಾಯಕ ಬಾಬರ್ ಅಜಮ್ ಮೇಲೆ ತನ್ನ ಕೋಪ ತಿರುಗಿಸಿದ್ದಾರೆ. ಆತ ನಾಯಕನಾಗಿ ತೆಗೆದುಕೊಂಡ ನಿರ್ಧಾರಗಳೇ ತಂಡದ ನಾಶಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ಬಾಬರ್ ಅಜಮ್ ನಾಯಕನಾಗಿ ಬಂದಾಗಿನಿಂದ ಪಾಕ್ ಸಾಮಾನ್ಯ ತಂಡಗಳ ವಿರುದ್ಧ ಸೋಲುತ್ತಿದೆ. ಈ ರೀತಿಯ ಕಾಮೆಂಟ್‌ಗಳನ್ನು ಮಾಡಲು ನಮಗೇ ಬೇಸರವಾಗುತ್ತದೆ. ಆದರೆ, ಅದೇ ಶೈಲಿಯ ಆಟವನ್ನು ನಾವು ನೋಡುತ್ತಿದ್ದೇವೆ. ತಂಡವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹಿರಿಯರು ತೆಗೆದುಕೊಳ್ಳಬೇಕು. ಆದರೆ, ಹಾಗೆ ಯಾವುದೂ ಆಗುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ 120 ರನ್‌ ಮಾಡಲಷ್ಟೇ ಶಕ್ತಿಹೊಂದಿದೆ. ನಿಮ್ಮ ಆಟವನ್ನು ಸುಧಾರಿಸದೆ ಎಲ್ಲಾ ಸ್ಟಾರ್‌ಗಳು, ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ನಾಯಕನಾಗಿ ಬಾಬರ್ ಆಜಮ್ ಅವರ ಅಂಕಿಅಂಶಗಳನ್ನು ನೋಡಿದರೆ, ತುಂಬಾ ಆಶ್ಚರ್ಯಕರವಾಗುತ್ತದೆ. ಅವರ ಸರಾಸರಿ ಕೇವಲ 27. ಸ್ಟ್ರೈಕ್ರೇಟ್ ಕೇವಲ 112 ಆಗಿದೆ. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಬಂದರೂ ತಂಡವನ್ನು ಗೆಲ್ಲಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಈ ಅಂಕಿಅಂಶಗಳನ್ನು ನೋಡಿದರೆ ‘ರಾಜ’ ಯಾರೆಂದು ಅರ್ಥವಾಗುತ್ತದೆ. ನಾವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗದಿದ್ದಾಗ ಈ 'ರಾಜ'ನನ್ನು ಏನು ಮಾಡೋಣ? ನಿಮ್ಮ ವೈಯಕ್ತಿಕ ಪ್ರದರ್ಶನದಿಂದ ಮಾತ್ರವಲ್ಲದೆ ನಾಯಕನಾಗಿ ನಿಮ್ಮ ನಿರ್ಧಾರಗಳಿಂದಲೂ ನೀವು ಜನರನ್ನು ಮೋಸ ಮಾಡುತ್ತಿದ್ದೀರಿ. ನೀವು ನಿಮ್ಮ ಸ್ನೇಹಿತರೊಂದಿಗೆ ತಂಡವನ್ನು ತುಂಬುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ.

2009ರಲ್ಲಿ ಪಾಕ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಹ್ಮದ್ ಶೆಹಜಾದ್ 13 ಟೆಸ್ಟ್, 81 ಓಡಿಐ ಮತ್ತು 59 ಟಿ20 ಪಂದ್ಯಗಳಲ್ಲಿ 6700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net