ಕೃಷಿ ವಿವಿ ವಿಧೇಯಕಕ್ಕೆ ಸಮ್ಮತಿ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅನುಮೋದನೆ

Agricultural University Bill approved Mandya
Published on

ಮಂಡ್ಯ: ಮಂಡ್ಯ ತಾಲೂಕಿನ ವಿ.ಸಿ ಫಾರ್ಮ್ ನಲ್ಲಿ ನೂತನ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಉಭಯ ಸದನದಲ್ಲಿ ಕೃಷಿ ವಿಜ್ಞಾನಗಳ(ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಮಂಡಿಸಿ ಅಂಗೀಕರಿಸಲಾಯಿತು. ಈ ಹಿನ್ನೆಲೆಯಲ್ಲಿ ವಿಧೇಯಕ ಅನುಮೋದನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿತ್ತು. ಮಾತ್ರವಲ್ಲದೆ ಇದಕ್ಕೆ ಪೂರಕವಾಗಿ ಕೆಲ ಪ್ರಕ್ರಿಯೆಗಳು ನಡೆಯುತ್ತಿದ್ದವು. ಇದರ ಮುಂದಿನ ಭಾಗವಾಗಿ 2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಉಭಯ ಸದನದಲ್ಲಿ ಮಂಡಿಸಿದರು. ವಿಧಾನಸಭೆಯಲ್ಲಿ ಅಂಗೀಕಾರವಾಗಿ ಬಂದಿದ್ದ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಅಧಿಕೃತವಾಗಿ ಅಂಗೀಕರಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ.

ಮಂಡ್ಯ ಕೃಷಿ ವಿಶ್ವವಿದ್ಯಾಲಯ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಸಚಿವ ಸಿಆರ್‌ಎಸ್ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿರುವ ರಾಜ್ಯಪಾಲರು ನೂತನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿಧೇಯಕಕ್ಕೆ ಸಹಮತಿ ನೀಡಿ ಅನುಮೋದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಥಾವರ್‌ಚಂದ್ ಗೆಹಲೋತ್ ಅವರನ್ನು ಮಂಡ್ಯ ಜಿಲ್ಲೆಯ ಜನರು ಹಾಗೂ ರೈತರ ಪರವಾಗಿ ಅಭಿನಂದಿಸಲಾಗಿದೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಗೋವಿಂದ ರಾಜು, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಎಚ್.ಜಿ.ಪ್ರಭಾಕರ್, ಮಂಡ್ಯ ಕೃಷಿ ವಿವಿಯ ವಿಶೇಷಾಧಿಕಾರಿ ಹರಿಣಿಕುಮಾರ್, ವಿಶೇಷ ಕರ್ತವ್ಯಾಧಿಕಾರಿ ಎ.ಬಿ.ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net