

ಬಂಟ್ವಾಳ: ಮುರುಕಲು ಮನೆಯಾದರೂ ಸರಿ ಸ್ವಂತ ಸೂರು ಇದ್ದರೆ ಮನೆ ಬಾಡಿಗೆಯ ಹಣವನ್ನಾದರೂ ಉಳಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬಹುದು ಎಂಬ ಯೋಚನೆಯಿಂದ ಖರೀದಿಸಿದ ಮನೆ ಎರಡೇ ತಿಂಗಳಲ್ಲಿ ನೆಲಕ್ಕಚ್ಚಿತ್ತು. ಇದರಿಂದಾಗಿ ವನಿತಾ ಶೆಟ್ಟಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕು ಅತಂತ್ರವಾಗಿತ್ತು. ಆದರೆ ಈಗ ‘ಜಾರಂದಗುಡ್ಡೆಯ ಪುಟ್ಟಕ್ಕ’ ವನಿತಾ ಶೆಟ್ಟಿ ಕುಟುಂಬದ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ. ಈ ಸಂಭ್ರಮದ ಹಿಂದಿನ ಪ್ರಥಮ ಹೆಗ್ಗಳಿಕೆ ‘ವಿಜಯವಾಣಿ’ಯದ್ದು.
ಹೌದು... ಅಂದು ಸುರಿದ ರಣಮಳೆಗೆ ಬಂಟ್ವಾಳದ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ನಿವಾಸಿ ವನಿತಾ ಶೆಟ್ಟಿ ಖರೀದಿಸಿದ್ದ ಮನೆ ಕುಸಿದು ದಯನೀಯ ಪರಿಸ್ಥಿತಿಗೆ ತಲುಪಿದ್ದ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿದ ಬೆನ್ನಲ್ಲೇ ಸಮಾಜದ ಅನೇಕ ಮಂದಿ ದಿಗ್ಗಜರು, ಸಹೃದಯ ದಾನಿಗಳು ನೆರವಿಗೆ ಧಾವಿಸಿದರು. ಇದರ ಪರಿಣಾಮವಾಗಿ ಅ.24ರಂದು ನೂತನ ಮನೆಯ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದ್ದು, ರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷ ದೇವದಾಸ್ ಶೆಟ್ಟಿ ಕೊಡ್ಮಾಣ್ ನೇತೃತ್ವ ವಹಿಸಲಿದ್ದಾರೆ.
ಆಶ್ರಯ ಕಳೆದುಕೊಂಡ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ದಿಕ್ಕೆಟ್ಟು ನಿಂತ ತಾಯಿಯ ಅರಣ್ಯ ರೋದನಕ್ಕೆ ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತ ನೆರವಿಗೆ ಧಾವಿಸಿದೆ. ಸೂಕ್ತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ವಾನವೀಯ ಸ್ಪಂದನೆ ನೀಡಿದೆ. ನೂತನ ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲು ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಹಾಗೂ ಪಿಡಿಒ ಅವರನ್ನೊಳಗೊಂಡ ತಂಡ ಮುಂದಾಗಿದೆ. ಗ್ರಾ.ಪಂ.ನ ಸಕಾಲಿಕ ಸ್ಪಂದನೆಗೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.
ಸುಸಜ್ಜಿತ ಮನೆ ನಿರ್ಮಾಣಕ್ಕೆ ಅಲ್ಪಪ್ರಮಾಣದ ಹಣ ಈಗಾಗಲೇ ಸಂಗ್ರಹವಾಗಿದ್ದು, ಇನ್ನಷ್ಟು ಮೊತ್ತದ ಅವಶ್ಯಕತೆ ಇದೆ. ಕಲ್ಲು, ಜಲ್ಲಿ, ಹೊಗೆ, ಸಿಮೇಂಟ್, ದಾರಂದ, ಕಿಟಕಿಯ ಅಗತ್ಯವಿದೆ. ನೆರವು ನೀಡಬಯಸುವ ಸಹೃದಯ ದಾನಿಗಳು 70267 75683 ಸಂಪರ್ಕಿಸಬಹುದಾಗಿದೆ.
ತನ್ನ ಮೂವರು ಹೆಣ್ಣು ಮಕ್ಕಳ ವಿದ್ಯಾಭಾಸಕ್ಕಾಗಿ ಅಡುಗೆ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ‘ಜಾರಂದಗುಡ್ಡೆಯ ಪುಟ್ಟಕ್ಕ’ ವನಿತಾ ಶೆಟ್ಟಿ ಅವರ ದಯನೀಯ ಸ್ಥಿತಿಯ ಬಗ್ಗೆ ಕನ್ನಡದ ನಂ.1 ಪತ್ರಿಕೆ ‘ವಿಜಯವಾಣಿ’ ಪ್ರಥಮವಾಗಿ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಬಂಟರ ಸಂಘದ ಪ್ರಮುಖರು, ಶಿಕ್ಷಕರು, ಸ್ಥಳೀಯರ ಸಹಿತ ಜಾತಿ, ಮತ, ಧರ್ಮ, ಪಕ್ಷದ ಎಲ್ಲೆಗಳನ್ನು ಮೀರಿ ಅನೇಕ ಮಂದಿ ಸಹೃದಯ ದಾನಿಗಳು ಮಾನವೀಯ ನೆರವು ನೀಡಿದ್ದಾರೆ.
ವನಿತಾ ಶೆಟ್ಟಿ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸುವ ನಿಟ್ಟಿನಲ್ಲಿ ಬಂಟ ಸಮುದಾಯಕ್ಕೆ ಸಂಬಂಧಿಸಿದ ಎಲ್ಲ ಒಕ್ಕೂಟಗಳು, ಸಂಘ ಸಂಸ್ಥೆಗಳ ಸಹಕಾರ ಲಭಿಸಲಿದೆ. ಸದೃಢವಾದ ತಾರಸಿ ಮನೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಲು ಸರ್ವಪ್ರಯತ್ನಗಳನ್ನು ಮಾಡಲಾಗುವುದು. - ದೇವದಾಸ ಶೆಟ್ಟಿ ಕೊಡ್ಮಾಣ್, ರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷ.https://www.vijayavani.net/appeal-to-the-union-minister-to-solve-the-highway-problemhttps://www.vijayavani.net/demand-for-construction-of-flyover-in-front-of-school