

ಮುಂಬೈ: 2014ರಲ್ಲಿ ಬ್ಯಾಂಗ್ ಬ್ಯಾಂಗ್ ಸಿನಿಮಾ ಮೂಲಕ ಮೊದಲ ಬಾರಿ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸಿದ್ಧಾರ್ಥ್ ಆನಂದ್ ಒಂದಾಗಿದ್ದರು. ಅದಾದ ಬಳಿಕ ಕಳೆದ ವರ್ಷ ವಾರ್ ಸಿನಿಮಾ ಮೂಲಕ ಕೈ ಜೋಡಿಸಿದ್ದರು. ಅದರ ಪರಿಣಾಮ ವಾರ್ ಸಿನಿಮಾ ದಾಖಲೆ ಬರೆಯಿತು. 2019ರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಸಾಲಿಗೆ ಸೇರಿತು. ಇದೀಗ ಇದೇ ಜೋಡಿ ಮತ್ತೆ ಮೋಡಿ ಮಾಡಲು ವೇದಿಕೆ ಸಿದ್ಧವಾಗುತ್ತಿದೆ.
ಹೌದು, ಸದ್ದಿಲ್ಲದೆ ಇದೇ ಜೋಡಿ ಮತ್ತೊಂದು ಸಿನಿಮಾ ಮಾಡಲು ತಯಾರಿ ನಡೆಸಿದೆ. ಹ್ಯಾಟ್ರಿಕ್ ಬಾರಿಸಲು ಪ್ಲ್ಯಾನ್ ಮಾಡಿದ್ದಾರೆ. ಸದ್ಯ ನಿರ್ದೇಶಕ ಸಿದ್ಧಾರ್ಥ್ ಆನಂದ್ ಪಠಾಣ್ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಶಾರುಖ್ ಖಾನ್ ಜತೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ಹೃತಿಕ್ ಜತೆ ಸಿನಿಮಾ ಶುರುವಾಗಲಿದೆಯಂತೆ.
ಚಿತ್ರಕ್ಕೆ ಫೈಟರ್ ಎಂಬ ಶೀರ್ಷಿಕೆ ಸಹ ಈಗಾಗಲೇ ಅಂತಿಮವಾಗಿದ್ದು, ಫೈಟರ್ ಜೆಟ್ ಪರಿಕಲ್ಪನೆಯಲ್ಲಿ ಸಿನಿಮಾ ಮೂಡಿಬರಲಿದೆಯಂತೆ. ಬಹುತೇಕ ಕೆಲಸಗಳನ್ನು ಲಾಕ್ಡೌನ್ ಅವಧಿಯಲ್ಲಿಯೇ ಮುಗಿಸಿಕೊಂಡಿರುವ ನಿರ್ದೇಶಕರು, ಸದ್ಯ ಸ್ಕ್ರೀನ್ಪ್ಲೇ ಬರೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನುಳಿದಂತೆ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಶೂಟಿಂಗ್ ಯಾವಾಗಿನಿಂದ ಶುರು ಎಂಬಿತ್ಯಾದಿ ವಿಚಾರಗಳು ಮುಂದಿನ ವರ್ಷವೇ ಗೊತ್ತಾಗಲಿದೆ. (ಏಜೆನ್ಸೀಸ್)