

ದಕ್ಷಿಣ ಆಫ್ರಿಕಾ: ಪ್ರಪಂಚದಲ್ಲಿ ಕೆಲವರಿಗೆ ಎಂತೆಂತಹ ತಿಕ್ಕಲುತನಗಳು ಇರುತ್ತವೆ, ಕೆಲವರು ಎಂತೆಂತಹ ಸೈಕೋಪಾತ್ಗಳು ಇರುತ್ತಾರೆ ಎಂಬುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು ವ್ಯಾಲೆಂಟಿನ್ ಡೇ ಗಾಗಿ ತನ್ನ ಗಂಡನಿಗೆ ಉಡುಗೊರೆ ನೀಡಲು ಮುಗ್ದ ಪ್ರಾಣಿಯಾದ ಜಿರಾಫೆಯ ದೆಹವನ್ನು ಕತ್ತರಿಸಿ ಅದರ ಹೃದಯ ಬಗೆದು ಕೊಟ್ಟಿದ್ದಾಳೆ.
ಹೌದು, ದಕ್ಷಿಣ ಆಫ್ರಿಕಾದ ಟ್ರೋಪಿ ಹಂಟರ್ (ಪ್ರಾಣಿಗಳನ್ನು ಭೇಟೆಯಾಡುವವರು) ಆಗಿರುವ ಮರಲಿಯಾಜ್ ವ್ಯಾನ್ ಡರ್ ಮೆರವ್ (Merelize Van Der Merwe) ಎನ್ನುವಾಕೆಯೇ ಜಿರಾಫೆಯ ಹೃದಯವನ್ನು ಬಗೆದು ಹೊರ ತೆಗೆದವಳು. ಈ ವಿಚಿತ್ರ ಹೆಣ್ಣಿನ ಕಾರ್ಯದ ಬಗ್ಗೆ ಜಗತ್ತಿನಲ್ಲಿ ಪ್ರಾಣಿ ಪ್ರಿಯರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದು, ಛಿ ಥು ಎಂದು ಉಗಿಯುತ್ತಿದ್ದಾರೆ.
ಕಳೆದ ಫೆಬ್ರವರಿ 14 ರಂದು ಸಾಮಾಜಿಕ ತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಜಿರಾಫೆ ಹೃದಯದೊಂದಿಗೆ ಇರುವ ಪೋಟೊವನ್ನು ಹಾಕಿರುವ ಈ ಮಹಿಳೆ, ನನ್ನ ಗಂಡನಿಗೆ ಇದು ವ್ಯಾಲಿಂಟಿನ್ ಉಡುಗೊರೆ ಎಂದು ಬರೆದುಕೊಂಡಿದ್ದಾಳೆ. ಫೆ 14 ರ ಮೊದಲು ಸುಮಾರು 17 ವರ್ಷದ ಜಿರಾಫೆಯನ್ನು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಭೇಟೆಯಾಡಿ ಕೊಂದು, ಅದರ ಜೊತೆ ಫೋಟೊಗಳನ್ನು ತೆಗೆದುಕೊಂಡಿದ್ದಳು ಈ ಮಹಿಳೆ. ನಂತರ ಜಿರಾಫೆಯನ್ನು ಕತ್ತರಿಸಿ ಅದರ ಹೃದಯವನ್ನು ಬಗೆದಿದ್ದಾಳೆ. ಅಲ್ಲದೇ ಅದನ್ನು ಕೈಯಲ್ಲಿ ಹಿಡಿದು ಫೋಟೊಗಳಿಗೆ ಫೋಸ್ ಕೊಟ್ಟಿದ್ದಾಳೆ. ಈಕೆ ಆನೆ ಸೇರಿದಂತೆ ಅನೇಕ ಪ್ರಾಣಿಗಳನ್ನು ಭೇಟೆಯಾಡಿ ಕೊಂದಿದ್ದಾಳೆ.
ಈ ಬಗ್ಗೆ ಸ್ವಲ್ಪವೂ ವಿಷಾದ ವ್ಯಕ್ತಪಡಿಸದ ಈ ಹೆಣ್ಣು, ಬೇರೆ ಪ್ರಾಣಿ ಸಂಕುಲಕ್ಕೆ ದಕ್ಕೆ ತರುವ ವಯಸ್ಸಾದ ಜಿರಾಫೆಯನ್ನು ಕೊಂದಿರುವುದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದ್ದಾಳೆ. ಈಕೆಯ ವಿರುದ್ಧ ಪೆಟಾ ಸೇರಿದಂತೆ ಪ್ರಾಣಿ ಪ್ರಿಯರು ಮುಗಿಬಿದ್ದಿದ್ದು, ಆಕೆಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. (ಏಜೇನ್ಸಿಸ್)