

ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ನಜೀಬ್ ತಾರಕೈ ಜೀವನ್ಮರಣದ ಹೋರಾಟದ ನಡುವೆ ಮಂಗಳವಾರ (ಅಕ್ಟೋಬರ್ 06) ಕೊನೆಯುಸಿರೆಳೆದಿದ್ದಾರೆ. 29 ವರ್ಷದ ನಜೀಬ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಉತ್ತಮ ಆಟಗಾರನನ್ನು ಕಳೆದುಕೊಂಡ ಆಫ್ಘಾನ್ ಕ್ರಿಕೆಟ್ ಮಂಡಳಿ (ಎಸಿಬಿ) ಅತೀವ ದುಃಖ ವ್ಯಕ್ತಪಡಿಸಿದೆ.
ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಎಸಿಬಿ ಮತ್ತು ಕ್ರಿಕೆಟ್ ಪ್ರೀತಿಸುವ ಅಫ್ಘಾನಿಸ್ತಾನವು ತಮ್ಮ ಸ್ಫೋಟಕ ಆರಂಭಿಕ ಆಟಗಾರನನ್ನು ಮತ್ತು ಒಳ್ಳೆಯ ವ್ಯಕ್ತಿ ನಜೀಬ್ ತಾರಕೈರನ್ನು ಕಳೆದುಕೊಂಡಿದೆ. ಇದು ನಿಜಕ್ಕೂ ಹೃದಯಬಿರಿಯುವಂತದ್ದು, ನಜೀಬ್ ಅಪಘಾತದಿಂದ ಮೃತಪಟ್ಟಿದ್ದಾರೆ. ನಿಜಕ್ಕೂ ನಮಗೆ ಶಾಕ್ ಆಗಿದೆ. ಅಲ್ಲಾ ಅವರಿಗೆ ಆಶೀರ್ವಾದ ಮಾಡಲಿ ಎಂದು ಬರೆದುಕೊಂಡಿದ್ದಾರೆ.
ಅಪಘಾತದಿಂದ ನಜೀಬ್ ತಲೆಗೆ ಬಲವಾದ ಹೊಡೆತ ಬಿದ್ದಿತ್ತು. ಸುಮಾರು 22 ಗಂಟೆಗಳವರೆಗೆ ಯಾವುದೇ ಚಲನೆ ಇಲ್ಲದೆ, ನಜೀಬ್ ಐಸಿಯುನಲ್ಲಿ ಕೋಮಾಗೆ ಜಾರಿದ್ದರು ಎಂದು ಆಫ್ಘಾನ್ ಕ್ರಿಕೆಟ್ ಬೋರ್ಡ್ನ ಮಾಜಿ ಮೀಡಿಯಾ ಮ್ಯಾನೇಜರ್ ಅಕ್ಟೋಬರ್ 3ರ ಶನಿವಾರದಂದು ಮಾಹಿತಿ ನೀಡಿದ್ದರು.
ಶುಕ್ರವಾರ (ಅ. 2) ಪೂರ್ವ ನಂಗಾರ್ಹರ್ ಪ್ರಾಂತ್ಯದ ಕಿರಾಣಿ ಅಂಗಡಿಗೆ ಭೇಟಿ ನೀಡಿ ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗುವಾಗ ರಸ್ತೆ ದಾಟುವ ವೇಳೆ ತಿರುವಿನಲ್ಲಿ ಕಾರೊಂದು ನಜೀಬ್ ಅವರಿಗೆ ಡಿಕ್ಕಿ ಹೊಡೆದಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಕೋಮಾಗೆ ಜಾರಿದ್ದ ನಜೀಬ್ ಇದೀಗ ಇಹಲೋಕ ತ್ಯಜಿಸಿದ್ದಾರೆ. ನಜೀಬ್ ಸಾವಿಗೆ ಕ್ರೀಡಾಲೋಕ ಕಂಬನಿ ಮಿಡಿದಿದೆ. (ಏಜೆನ್ಸೀಸ್)