'ಸರ್ಕಾರವೆ ಕಲ್ಲು-ಮಣ್ಣು ಸೇರಿರೋ ರಾಗೀನ ಪೂರೈಸ್ತಿರೋವಾಗ ನಾವೇನು ಮಾಡೋಣ?'

26CBP2
Published on

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಳಪೆ ಎಂಬುದು ಅರಿವಿಗೆ ಬಂದರೂ ಹಾಗೆಯೇ ವಿತರಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಬಹುತೇಕ ಅಂಗಡಿಗಳಲ್ಲಿ ವಿತರಿಸುತ್ತಿರುವ ರಾಗಿಯು ಕಳಪೆಯಾಗಿದ್ದು, ಕಲ್ಲು, ಮಣ್ಣು, ಹೊಟ್ಟು ಹೆಚ್ಚಾಗಿದೆ.

ಬಿಪಿಎಲ್ ಕಾರ್ಡ್‌ನ ಒಬ್ಬ ಸದಸ್ಯನಿಗೆ ತಲಾ 5 ಕೆ.ಜಿ.ಅಕ್ಕಿ ಮತ್ತು ರಾಗಿ ನೀಡಲಾಗುತ್ತದೆ ಎಂಬುದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳ ಮಾತು. ಇಲ್ಲಿ ಅಕ್ಕಿಯ ಗುಣಮಟ್ಟವು ಎಂದಿನಂತೆ ಸಾಧಾರಣವಾಗಿಯೇ ಇದೆ. ಆದರೆ, ಎರಡು ತಿಂಗಳಿಂದಲೂ ವಿತರಿಸುತ್ತಿರುವ ರಾಗಿ ಮಾತ್ರ ಕಳಪೆಯಾಗಿದೆ.

ಮೂಟೆಗಳಲ್ಲಿ ಸಮಸ್ಯೆ : ಬಹುತೇಕ ಮೂಟೆಗಳ ರಾಗಿ ಸರಿಯಾಗಿಲ್ಲ. ನಿಗಮದ ಗೋದಾಮಿನಿಂದ ಪರೀಕ್ಷಿಸದೆ ಅಂಗಡಿಗಳಿಗೆ ತಂದು ಹಾಕಲಾಗುತ್ತಿದೆ. ಇದನ್ನು ಪಡಿತರ ವಿತರಕರು ಫಲಾನುಭವಿಗೆ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದಾಗ ಸರ್ಕಾರದ ಪೂರೈಕೆ ಹೀಗೇ ಇದೆ. ನಾವೇನು ಮಾಡುವುದು ಎಂಬ ಉತ್ತರ ನೀಡುತ್ತಿದ್ದಾರೆ.

44,848 ಕ್ವಿಂಟಾಲ್ ರಾಗಿ ದಾಸ್ತಾನು: ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುತ್ತಿರುವ ರಾಗಿಯನ್ನು ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಖರೀದಿಸಲಾಗಿದೆ. ಜಿಲ್ಲೆಯಲ್ಲಿ 1,674 ರೈತರಿಂದ ಖರೀದಿಸಿದ 44,848 ಕ್ವಿಂಟಾಲ್ ರಾಗಿ ದಾಸ್ತಾನಿಟ್ಟುಕೊಳ್ಳಲಾಗಿದೆ. ಆದರೆ, ಇದೇ ವೇಳೆ ಗುಣಮಟ್ಟ ಖಾತ್ರಿಪಡಿಸಿಕೊಳ್ಳದಿರುವುದು ಮತ್ತು ಪ್ರಭಾವಿಗಳ ಕೈಚಳಕಕ್ಕೆ ಮಣಿದು ಲೆಕ್ಕ ತೋರಿಸಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 3,150 ರೂ ನಿಗದಿಪಡಿಸಲಾಗಿತ್ತು. ಆದರೆ, 1500 ರೂ.ಗಳಿಗೂ ಕೇಳದ ಗುಣಮಟ್ಟವಿಲ್ಲದ ರಾಗಿಯನ್ನು ಖರೀದಿಸಲಾಗಿದೆ. ಇದನ್ನು ಬಡ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಪರೀಕ್ಷಿಸುವ ಗೋಜಿಗೂ ಹೋಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net