

ಶೃಂಗೇರಿ: ಅವಧಿಗೂ ಮುನ್ನ ಆರಂಭವಾದ ಮುಂಗಾರು ಮಳೆಯಿಂದ ಈ ವರ್ಷ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲಹೆಗ್ಡೆ ಹೇಳಿದರು.
ಕನ್ನಡ ಭವನದಲ್ಲಿ ತಾಲೂಕು ಕೃಷಿಕ ಸಮಾಜ, ತಾಲೂಕು ಪತ್ರಕರ್ತರ ಸಂಘ ಮತ್ತು ಮ್ಯಾಮ್ಕೋಸ್ ಆಶ್ರಯದಲ್ಲಿ ಏರ್ಪಡಿಸಿದ್ದ ಜೇನು ಮತ್ತು ಕಾಳುಮೆಣಸಿನ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಹವಾಮಾನ ನಂಬಿ ಬದುಕಬೇಕಿದೆ. ಕೃಷಿಯನ್ನು ಆಸಕ್ತಿಯಿಂದ ಮಾಡಿ, ನೂತನ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು.
ಜೇನು ಕೃಷಿ ಬಗ್ಗೆ ಮೃಗವಧೆ ಕೃಷಿಕ ನಾಗೇಂದ್ರ ಮಾಹಿತಿ ನೀಡಿ, ಜೇನುತುಪ್ಪ ಬಹಳ ಹಿಂದಿನ ಕಾಲದಿಂದ ಬಳಕೆಯಲ್ಲಿತ್ತು.ನಿಸರ್ಗದಲ್ಲಿ ವಾಸಿಸುವ ಜೇನು ಕುಟುಂಬಗಳನ್ನು ಪಳಗಿಸಲು ಸಾಧ್ಯವಿಲ್ಲ. ಆದರೆ ಅವುಗಳ ಗುಣನಡತೆ ಅನುಸರಿಸಿ ಸಾಕುವಂತಹ ಪ್ರಕ್ರಿಯೆ ಬಳಕೆಯಲ್ಲಿದೆ. ಜೇನು ನೊಣಗಳ ಆಹಾರ ಹೂ ಗಳಲ್ಲಿ ಇರುವ ಪರಾಗ ಮತ್ತು ಪುಷ್ಪ ರಸ. ಜೇನುಪೆಟ್ಟಿಗೆಯಲ್ಲಿ ಬಂದು ಸೇರುವ ಕುಟುಂಬಗಳ ಮೇಲೆ ನಿಗಾ ಇಟ್ಟು ಜೇನು ಕೃಷಿ ಮಾಡವುದರಿಂದ ಅರ್ಥಿಕ ಸಬಲತೆ ಪಡೆಯಬಹುದು ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ ಅನಂತಯ್ಯ, ತೋಟಗಾರಿಕೆ ಇಲಾಖೆ ಅಧಿಕಾರಿ ಶ್ರೀ ಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಕೃಷಿಕ ಸಮಾಜದ ಉಪಾಧ್ಯಕ್ಷ ಜಿ.ಎಂ.ಶ್ರೀಧರ್, ಶೃಂಗೇರಿ ಸುಬ್ಬಣ್ಣ, ರಂಜಿತ್ ಇದ್ದರು.