ಅಲೆಕ್ಸಾದಲ್ಲಿ ಅದಿತಿ: ವಿಶೇಷ ತನಿಖಾಧಿಕಾರಿಯ ಪಾತ್ರದಲ್ಲಿ ನಟನೆ

Adithi
Published on

ಬೆಂಗಳೂರು: ಕಳೆದ ಐದು ತಿಂಗಳುಗಳಲ್ಲಿ ಅದಿತಿ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಿದ್ದು, ಇನ್ನೂ 10 ಚಿತ್ರಗಳು ಬಿಡುಗಡೆಯಾಗುವುದಕ್ಕಿದೆ. ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಬಹುತೇಕ ಮುಗಿಸಿದ್ದಾರೆ. ಅದೇ ‘ಅಲೆಕ್ಸಾ’. ಈ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದ್ದು, ಇತ್ತೀಚೆಗೆ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮುಗಿದಿದೆ.

ರವಿವರ್ಮ ನಿರ್ದೇಶನದಲ್ಲಿ ಹೊಡೆದಾಟದ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಿದ್ದು, ಇದರಲ್ಲಿ ಅದಿತಿ ಪ್ರಭುದೇವ, ಪವನ್ ತೇಜ್ ಮುಂತಾದವರು ಭಾಗವಹಿಸಿದ್ದಾರೆ. ಇದೊಂದು ಕ್ರೖೆಮ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಅದಿತಿ ವಿಶೇಷ ತನಿಖಾಧಿಕಾರಿಯ ಪಾತ್ರವನ್ನು ಮಾಡುತ್ತಿದ್ದಾರಂತೆ. ಈ ಹಿಂದಿ ಪ್ರಜ್ವಲ್ ದೇವರಾಜ್ ಅಭಿನಯದ 25ನೇ ಚಿತ್ರ ‘ಭುಜಂಗ’ ನಿರ್ದೇಶಿಸಿದ್ದ ಜೀವ, ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಸಹ ಅವರದ್ದೇ.

ಈ ಚಿತ್ರವನ್ನು ವಿ. ಚಂದ್ರು ಎನ್ನುವವರು ನಿರ್ವಿುಸುತ್ತಿದ್ದು, ಅದಿತಿ ಮತ್ತು ಪವನ್ ಜತೆಗೆ ‘ನಾಗಿಣಿ’ ಧಾರಾವಾಹಿ ಖ್ಯಾತಿಯ ನಾಗಾರ್ಜುನ್, ಮೇಘಶ್ರೀ, ಹನುಮಂತೇಗೌಡ, ಚಂದ್ರಕಲಾ ಮೋಹನ್ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net