More

    ಗಜಾನನ ಗ್ಯಾಂಗ್ ಸೇರಿದ ಅದಿತಿ ಪ್ರಭುದೇವ

    ಬೆಂಗಳೂರು: ‘ನಮ್ ಗಣಿ ಬಿಕಾಂ ಪಾಸ್’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕ ಮತ್ತು ನಿರ್ದೇಶಕನಾಗಿ ಪದಾರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ, ಇದೀಗ ಗಣೇಶ ಚೌತಿಯಂದು ಇನ್ನೊಂದು ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ‘ಗಜಾನನ ಆಂಡ್ ಗ್ಯಾಂಗ್’ ಎಂಬ ಚಿತ್ರ ಮಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದರೂ, ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಈಗ ಈ ಚಿತ್ರಕ್ಕೆ ನಾಯಕ ಮತ್ತು ನಾಯಕಿ ಯಾರೆಂಬುದನ್ನು ನಿರ್ದೇಶಕರು ಬಹಿರಂಗಪಡಿಸಿದ್ದಾರೆ.

    ‘ಗಜಾನನ ಆಂಡ್ ಗ್ಯಾಂಗ್’ ಚಿತ್ರದಲ್ಲಿ ಶ್ರೀಮಹದೇವ್ ನಾಯಕನಾಗಿ ನಟಿಸುತ್ತಿರುವುದು ಒಂದೆಡೆಯಾದರೆ, ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ. ಪಕ್ಕಾ ಹಾಸ್ಯ ಪ್ರಧಾನ ಮತ್ತು ಯುವಪೀಳಿಗೆ ಸುತ್ತ ಗಿರಕಿ ಹೊಡೆಯುವ ಕಥೆ ಇದಾಗಿದ್ದು, ಈಗಾಗಲೇ ಸ್ಕ್ರೀನ್​ಪ್ಲೇ ಕೆಲಸಗಳನ್ನೂ ಮುಗಿಸಿಕೊಂಡು ಶೂಟಿಂಗ್ ನಡೆಸಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ನಾಯಕಿ ಅದಿತಿ ಪ್ರಭುದೇವ ಈಗಾಗಲೇ ಹಲವು ವಿಭಿನ್ನ ಬಗೆಯ ಪಾತ್ರಪೋಷಣೆ ಮಾಡಿ ಗಮನ ಸೆಳೆದಿದ್ದಾರೆ.

    ಈ ಚಿತ್ರದಲ್ಲಿ ಮಿಡಲ್​ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ನಿರ್ದೇಶಕ ಅಭಿಷೇಕ್, ‘ಅದಿತಿ ಅವರದ್ದು ಒಂದು ರೀತಿ ಎಮೋಷನಲ್ ಆಗಿರುವ ಪಾತ್ರ. ಕಥೆಯ ಒಂದೆಳೆ ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡರು. ಟೈಟಲ್ ನೋಡಿದಾಕ್ಷಣ ಕಾಮಿಡಿ ಶೈಲಿಯ ಸಿನಿಮಾ ಅನಿಸಿದರೂ, ಯಾವುದೇ ಶೈಲಿಗೆ ಸೀಮಿತವಾಗದ ಸಿನಿಮಾ ಇದು. ಎಲ್ಲ ಅಂಶಗಳನ್ನೂ ಸೇರಿಸಿ, ಎಲ್ಲ ವರ್ಗದವರಿಗೂ ಕನೆಕ್ಟ್ ಆಗುವ ಕಥೆ ‘ಗಜಾನನ ಗ್ಯಾಂಗ್’ನದ್ದು’ ಎನ್ನುತ್ತಾರೆ ಅಭಿಷೇಕ್. ಅಂದಹಾಗೆ, ಈ ಚಿತ್ರದ ಚಿತ್ರೀಕರಣ ಅಕ್ಟೋಬರ್​ನಿಂದ ಪ್ರಾರಂಭವಾಗಲಿದೆ.

    ಲಾಕ್​ಡೌನ್​ನಲ್ಲಿ ಮಾಡಿದ ಕೆಲಸ ಒಂದೆರಡಲ್ಲ! : ಲಾಕ್​ಡೌನ್ ಶುರುವಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಂಡು ಮತ್ತೆ ಮಾಯವಾಗುತ್ತಿದ್ದ ನಟಿ ಅದಿತಿ ಪ್ರಭುದೇವ, ಆ ಸುದೀರ್ಘ ಅವಧಿಯನ್ನು ಸರಿಯಾಗಿಯೇ ಬಳಸಿಕೊಂಡಿ ದ್ದಾರೆ. ಯೋಗ, ಫಿಟ್​ನೆಸ್ ಕಡೆ ಹೆಚ್ಚು ಗಮನ ಹರಿಸಿದ್ದ ಅವರು, ಸಾಮಾಜಿಕ ಅಂತರದ ಜತೆಗೆ ಮೊಬೈಲ್​ನಿಂದಲೂ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರಂತೆ. ‘ಒಂದಷ್ಟು ದಿನಗಳ ಕಾಲ ಮೊಬೈಲ್ ಬಳಕೆ ಬಿಟ್ಟ ಮೇಲೆ ನಿಜಕ್ಕೂ ನೆಮ್ಮದಿ ಸಿಕ್ಕಿತ್ತು. ಮನೆಯಲ್ಲಿಯೇ ಕುಟುಂಬದ ಜತೆಗೆ ಸಮಯವನ್ನು ಕಳೆದೆ, ಸಿನಿಮಾ ನೋಡುವುದರಿಂದ ಹಿಡಿದು, ಯೋಗ ನಿತ್ಯದ ಸಂಗಾತಿಯಾಗಿತ್ತು. ಈ ನಡುವೆ ಲಾಕ್​ಡೌನ್ ಸಡಿಲವಾದ ಮೇಲೆ ಧಾರವಾಡ ಜಿಲ್ಲೆಯ ಕುಂದಗೋಳದ ಸಂಬಂಧಿಕರ ಮನೆಗೆ ಹೋಗಿದ್ದೆ. ಕೊಟ್ಟಿಗೆ ಸ್ವಚ್ಛ ಮಾಡುವುದರಿಂದ ಹಿಡಿದು, ಹಾಲು ಕರೆಯುವುದು, ಹೊಲದಲ್ಲಿ ಸುತ್ತಾಟ ಎಲ್ಲವೂ ಮಜ ಕೊಟ್ಟಿತ್ತು. ಇದೀಗ ಮತ್ತೆ ಸಿನಿಮಾ ಕೆಲಸಗಳು ಶುರುವಾಗಿರುವುದರಿಂದ ಪಾಲ್ಗೊಳ್ಳಬೇಕಿದೆ’ ಎನ್ನುತ್ತಾರೆ ಅದಿತಿ.

    ಟಿ.ವಿ, ಸಿನಿಮಾ ಶೂಟಿಂಗ್​ಗೆ ಅನುಮತಿ; ಮಾರ್ಗದರ್ಶಿ ಸೂತ್ರ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts