ಕಡಬ: ಐತ್ತೂರು ಗ್ರಾಮದ ಶಿವಾಜಿನಗರ ನಿವಾಸಿ ಅಹ್ಮದ್ ಕುಂಞ ಎಂಬುವವರ ಪುತ್ರ ಮಹಮ್ಮದ್ ಆಸಿಫ್ ಶಾಶ್ವತ ಅಂಗವಿಕಲರಾಗಿದ್ದು ಅವರಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದ್ದು, ಮನವಿಗೆ ಸ್ಪಂದಿಸಿ ಯುವಕನಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರೂ ಇದುವರೆಗೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಂಗವಿಕಲ ಯುವಕ ಹಾಗೂ ಆತನ ತಾಯಿ ಸಹಿತ ಐತ್ತೂರು ಗ್ರಾ.ಪಂ.ಸದಸ್ಯ ಮನಮೋಹನ್ ಗೊಳ್ಯಾಡಿ ನೇತೃತ್ವದಲ್ಲಿ ಪ್ರಧಾನ ಮಂತ್ರಿಗೆ ತಾಲೂಕು ಕಚೇರಿಮೂಲಕ ಮನವಿ ಸಲ್ಲಿಸಲಾಯಿತು.
ಶಾಶ್ವತ ಅಂಗವಿಕಲ ಹೊಂದಿ ಪೂರ್ಣ ಪ್ರಮಾಣದಲ್ಲಿ ಮಲಗಿದಲ್ಲೇ ಇರುವ ಮಹಮ್ಮದ್ ಆಸಿಫ್ ಅವರಿಗೆ ಸರ್ಕಾರಿ ಸವಲತ್ತು ಪಡೆಯಲು ಹಲವಾರು ಬಾರಿ ಆಧಾರ್ ನೋಂದಣಿ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಇದರಿಂದ ಅವರು ಪಡಿತರ ಚೀಟಿ ವಂಚಿತರಾಗಿದ್ದು ಈ ಬಗ್ಗೆ ತಹಸೀಲ್ದಾರರು ಹಾಗೂ ಜಿಲ್ಲಾಧಿಕಾರಿಗೆ ನೀಡಿದ ಮನವಿಯಂತೆ ಜಿಲ್ಲಾಧಿಕಾರಿಗಳು ಕೂಡಲೇ ಆಧಾರ್ ನೋಂದಣಿ ಮಾಡಿಕೊಡುವಂತೆ ಜಿಲ್ಲಾ ಆಧಾರ್ ಸೇವಾ ಕೇಂದ್ರದವರಿಗೆ ನಿರ್ದೇಶನ ನೀಡಿದ್ದರೂ ಇದುವರೆಗೆ ಆಧಾರ್ ಮಾಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ ಗೊಳ್ಯಾಡಿ ನೇತೃತ್ವದಲ್ಲಿ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಕಡಬ ಆಡಳಿತ ಕಚೇರಿ ಉಪತಹಸೀಲ್ದಾರ ಬೀಮಯ್ಯ ಮನವಿ ಸ್ವೀಕರಿಸಿದರು. ಈ ಸಂದರ್ಭ ಐತ್ತೂರು ಗ್ರಾ.ಪಂ.ಅಧ್ಯಕ್ಷೆ ವತ್ಸಲ, ಸದಸ್ಯರಾದ ನಾಗೇಶ್ ಕೋಕಲ, ಪ್ರಮುಖರಾದ ಸೈಯದ್ ಮೀರಾ ಸಾಹೇಬ್, ಟೋನಿ, ರಶೀದ್, ಮೋನಪ್ಪ ಪೂಜಾರಿ, ಅಬ್ಬಾಸ್, ಲಿಂಗಪ್ಪ ಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.