ಶಾಂತಿ, ಸೌಹಾರ್ದ ಸಾರುವ ಅಡ್ಡಣ ಪೆಟ್ಟು: ಬಲು ವಿಶಿಷ್ಟ ಮಂಡೆಕೋಲಿನ ಆಚರಣೆ : ಹಳೇ ಸಂಪ್ರದಾಯ ಇಂದಿಗೂ ಮುಂದುವರಿಕೆ

New Project (10)
Published on

ಗಂಗಾಧರ ಕಲ್ಲಪಳ್ಳಿ ಸುಳ್ಯ

ದೈವವೇ ಬಂದು ಜಗಳ ಬಿಡಿಸಿ ಸೌಹಾರ್ದದಿಂದ ಬಾಳಿ ಎಂಬ ಗತಕಾಲದ ದೈವ ಸಂದೇಶವನ್ನು ಇಂದಿಗೂ ಜನಮಾನಸಕ್ಕೆ ಮುಟ್ಟಿಸುವ ವಿಶಿಷ್ಟ ಆಚರಣೆ ಅಡ್ಡಣಪೆಟ್ಟು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಪ್ರತಿ ವರ್ಷ ನಡೆಯುತ್ತಿದೆ.

ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಜಾತ್ರೋತ್ಸವ ಅಂಗವಾಗಿ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದ ಸಂದರ್ಭ ನಡೆಯುವ ವಿಶಿಷ್ಟವಾದ ಅಡ್ಡಣ ಪೆಟ್ಟು ಎಂಬ ಹೊಡೆದಾಟದ ಸಂಪ್ರದಾಯ ಜಾತ್ರೋತ್ಸವದ ಪ್ರಮುಖ ಆಕರ್ಷಣೆ. ಶ್ರೀ ಮಹಾ ವಿಷ್ಣುಮೂರ್ತಿ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದ ಮರುದಿನ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮ ನಡೆಯುವುದು ಸಂಪ್ರದಾಯ.

ಅಡ್ಡಣ ಪೆಟ್ಟಿನ ಇತಿಹಾಸ

ಮಂಡೆಕೋಲು ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆ ಬೇರೆ ಐಹಿತ್ಯವಿದೆ. ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂಧಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ ಅಡ್ಡಣ ಪೆಟ್ಟು ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.

ಆಚರಣೆ ಹೇಗೆ?

ನೇಮೋತ್ಸವ ದಿನದಂದು ಉಳ್ಳಾಕುಲು ದೈವದ ಭಂಡಾರ ತೆಗೆದ ಬಳಿಕ ದೈವ ಸಹಿತ ನಾಲ್ಕೂರಿನ ಪ್ರತಿನಿಧಿಗಳು, ದೈವರ ಪರಿಚಾರಕರು ದೇವಸ್ಥಾನದ ಸಮೀಪದ ಗದ್ದೆಯಲ್ಲಿರುವ ಕಟ್ಟೆಗೆ ತೆರಳುತ್ತಾರೆ. ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಮನೆತನಕ್ಕೆ ಸೇರಿದ ನಾಲ್ವರು ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ(ಅಡ್ಡಣ) ಹಿಡಿದು ದೈವದ ಜತೆಯಲ್ಲಿ ತೆರಳುತ್ತಾರೆ. ಕಟ್ಟೆಯ ಸಮೀಪ ತೆರಳಿದ ಬಳಿಕ ಕೆಲವೊಂದು ಸಂಪ್ರದಾಯ ಆಚರಣೆಗಳು ನಡೆದು ಅಡ್ಡಣ ಹಿಡಿದ ಯುವಕರು ಅಡ್ಡಣವನ್ನು ನೆಲದಲ್ಲಿ ಎದುರು ಬದುರಾಗಿ ಇಡುತ್ತಾರೆ. ಲಾಠಿ ಮಾದರಿಯ ಹೊಡೆಯುವ ದಂಡವನ್ನು ಕೈಯಲ್ಲಿ ಹಿಡಿದಿರುತ್ತಾರೆ. ಇತ್ತ ಅಡ್ಡಣ ಹೊಡೆತದಲ್ಲಿ ಭಾಗವಹಿಸುವ ನಾಲ್ವರು ಯುವಕರಿಗೆ ಬೆನ್ನು ಹಾಕಿ ಉಳ್ಳಾಕುಲು ದೈವ ನಿಂತಿರುತ್ತಾರೆ. ಈ ಸಂದರ್ಭ ತುಳು ನುಡಿಗಟ್ಟೊಂದನ್ನು ಹೇಳಲಾಗುತ್ತದೆ. ಈ ನುಡಿಗಟ್ಟು ಮುಗಿಯುತ್ತಿದ್ದಂತೆ ದೈವದ ಪರಿಚಾರಕರೊಬ್ಬರು ಅಡ್ಡಣ ಹೊಡೆತಕ್ಕೆ ಅಣಿಯಾಗಿ ನಿಂತಿರುವ ಯುವಕರತ್ತ ಕಲಶದ ನೀರಿನಿಂದ ಪ್ರೋಕ್ಷಣೆ ಮಾಡುತ್ತಾರೆ. ಕಲಶ ಪ್ರೋಕ್ಷಣೆ ಆಗುತ್ತಿದ್ದಂತೆ ಎದುರು ಬದುರಾಗಿ ನಿಂತಿರುವ ಯುವಕರು ನೆಲದಲ್ಲಿಟ್ಟ ಅಡ್ಡಣವನ್ನು ಕೈಗೆ ಎತ್ತಿಕೊಂಡು ಅದನ್ನು ಗುರಾಣಿಯಂತೆ ಹಿಡಿದು ಎದುರುಬದುರಾಗಿ ಹೊಡೆದಾಟ ಆರಂಭಿಸುತ್ತಾರೆ. ಪ್ರತಿಯೊಬ್ಬರೂ ಎದುರು ಪ್ರತಿನಿಧಿಯ ಕೈಯಲ್ಲಿ ಹಿಡಿದಿರುವ ಅಡ್ಡಣಕ್ಕೆ ಹೊಡೆಯಬೇಕೆಂಬ ನಿಯಮವೂ ಇದೆ. ಹೊಡೆದಾಟ ಜೋರಾಗುತ್ತಿದ್ದಂತೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.

ವಿವಿಧೆಡೆಯಿಂದ ಭಕ್ತರು

ಶುಕ್ರವಾರ ನಡೆದ ನೇಮದಲ್ಲಿ ಬೆಳಗ್ಗೆ ನಾಲ್ಕೂರಿನ ಪ್ರತಿನಿಧಿಗಳ ನಡುವೆ ತುಳುನಾಡಿನ ಅತ್ಯಂತ ಅಪರೂಪದ ಅಡ್ಡಣ ಪೆಟ್ಟು ಆಚರಣೆ ನಡೆಯಿತು. ಹಳೇ ಸಂಪ್ರದಾಯವನ್ನು ಪ್ರತಿನಿಧಿಸಿ ಸಾಂಕೇತಿಕವಾಗಿ ನಡೆಯುವ ಈ ಹೊಡೆದಾಟವನ್ನು ನೋಡಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಇಲ್ಲಿವೆ. ಉಳ್ಳಾಕುಲು ನೇಮದ ಸಂದರ್ಭ ಇದೇ ನಾಲ್ಕು ಮನೆತನದ ಪ್ರತಿನಿಧಿಗಳು ಬೆತ್ತದಿಂದ ತಯಾರಿಸಿದ ಗುರಾಣಿಯ ಮಾದರಿಯ ಅಡ್ಡಣವನ್ನು ಹಿಡಿದು ದಂಡದಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಉಳ್ಳಾಕುಲು ದೈವ ಬಂದು ಹೊಡೆದಾಟ ಬಿಡಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net