ಶಿಕ್ಷಣದಲ್ಲಿ ರಂಗಭೂಮಿ ಮಾದರಿ ಪಠ್ಯ ಅಳವಡಿಕೆ ಸೂಕ್ತ: ಮಂಡ್ಯ ರಮೇಶ್ ಅಭಿಮತ

10
Published on

ಮೈಸೂರು: ಪ್ರಸಕ್ತ ಶಿಕ್ಷಣದಲ್ಲಿ ರಂಗಭೂಮಿ ಮಾದರಿ ಪಠ್ಯ ಅಳವಡಿಕೆ ಸೂಕ್ತ ಎಂದು ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನುಭೂತಿ ಟ್ರಸ್ಟ್‌ಗೆ ಚಾಲನೆ ಹಾಗೂ ರಂಗಾಯಣ ನಿವೃತ್ತ ಕಲಾವಿದ ರಾಮನಾಥ್ ರಚಿತ ಡ್ರಾಮಾ ಕ್ಲಬ್, ಷಡ್ಗುಣ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಸಕ್ತ ಶಿಕ್ಷಣ ಕ್ಷೇತ್ರದಲ್ಲಿ ರಂಗಭೂಮಿ ಮಾದರಿ ಪಠ್ಯ ಅಳವಡಿಕೆ ಸೂಕ್ತ ಎಂಬುದು ಕಲಾವಿದ ರಾಮನಾಥ್ ಸೇರಿದಂತೆ ಹಲವರ ನಿಲುವಾಗಿದ್ದು, ಆ ನಿಲುವನ್ನು ನಾನೂ ಅನುಮೋದಿಸುತ್ತೇನೆ. ರಂಗ ವೇದಿಕೆಯಿಂದ ವಿದ್ಯಾರ್ಥಿಗಳಲ್ಲಿ ಚಟುವಟಿಕೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಏಕ ವ್ಯಕ್ತಿ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿವೆ, ಅದನ್ನು ನಾನು ವಿರೋಧಿಸುವುದಿಲ್ಲ. ಆದರೆ, ಹಲವಾರು ಜನರು ಕೂಡಿ ಪ್ರದರ್ಶಿಸುವ ನಾಟಕಗಳನ್ನು ಹೆಚ್ಚು ಪ್ರೋತ್ಸಾಹಿಸುತ್ತೇನೆ. ನಾಟಕದಲ್ಲಿ ಹಲವು ಕ್ಷೇತ್ರದ ಜನರು ಒಂದೇ ವೇದಿಕೆಯಲ್ಲಿ ಭಾಗಿಯಾಗುವುದರಿಂದ ಅಲ್ಲಿ ಕ್ರೋಧ, ತಾಳ್ಮೆ, ಓದು, ಕಲಿಕೆ, ಜಗಳ, ಮುನಿಸು ಸೇರಿದಂತೆ ಒಬ್ಬರಲ್ಲಿ ಒಂದೊಂದು ಗುಣ ಅನಾವರಣಗೊಳ್ಳುತ್ತದೆ. ಇಂತಹ ಗುಣಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿ, ನಾಟಕದ ರೂಪದಲ್ಲಿ ಪ್ರದರ್ಶನಗೊಳ್ಳುತ್ತದೆ ಎಂದರು.
35 ವರ್ಷಗಳ ಹಿಂದೆ ಬಿ.ವಿ.ಕಾರಂತರು ಹಲವು ಯುವ ಕಲಾವಿದರನ್ನು ಒಗ್ಗೂಡಿಸಿ ರಂಗಾಯಣ ಕಟ್ಟಿದರು. ಆ ತಂಡದಲ್ಲಿ ನಾನು, ರಾಮನಾಥ್ ಇಬ್ಬರು ಕಲಿತು ಪ್ರಸ್ತುತ ಸಮಾಜದಲ್ಲಿ ಸಾರ್ಥಕ ಜೀವನ ನಡೆಸುತ್ತಿದ್ದೇವೆ ಎಂದು ರಂಗಾಯಣದ ಮೂಲಕ ರಂಗಭೂಮಿಯಲ್ಲಿ ಬೆಳೆದು ಬಂದ ಹಾದಿಯನ್ನು ಸ್ಮರಿಸಿದರಲ್ಲದೆ, ಬಿ.ವಿ.ಕಾರಂತರು ರಾಮನಾಥ್ ರಚಿಸಿದ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿರುವುದು ಸಂತೋಷದ ಸಂಗತಿ ಎಂದು ಮೇಲಕು ಹಾಕಿದರು.
ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ಒಂದು ವಾಕ್ಯದಲ್ಲಿ ಹೇಳಬೇಕಾದದ್ದನ್ನು ದಿನವಿಡೀ ಎಳೆಯುವ ಸಿನಿಮಾ, ಧಾರಾವಾಹಿಗಳನ್ನು ನೋಡಿದರೆ ಬೇಸರವಾಗುತ್ತದೆ. ನಟನೆಯ ಯಾವುದೇ ತರಬೇತಿ ಇಲ್ಲದವರಿಂದ ಇಂತಹ ದೃಶ್ಯ ಬರಲಿದೆ. ಆದರೆ ರಂಗಾಯಣದಂತಹ ಸಂಸ್ಥೆಗಳು ಆಯೋಜಿಸುವ ರಂಗ ತರಬೇತಿ ಶಿಬಿರಗಳಲ್ಲಿ ಅನೇಕ ಯುವ ಕಲಾವಿದರು ನಟನೆಯ ಬಗ್ಗೆ ತರಬೇತಿ ಪಡೆದು ಅತ್ಯದ್ಭುತವಾಗಿ ನಟಿಸಲು ಸಾಧ್ಯವಿದೆ. ಹಾಗಾಗಿ ರಂಗಾಯಣದಂತಹ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಅಂತೆಯೇ ಯಾವುದೇ ಕೀಯಾಶೀಲ ಸಂಸ್ಥೆಗಳು ಸರ್ಕಾರದ ಅಧೀನಕ್ಕೆ ಒಳಪಟ್ಟರೆ ಅವುಗಳು ಸ್ವಾಯತ್ತಕ್ಕೆ ಧಕ್ಕೆಯಾಗಿ ಆ ಸಂಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರೃ ಇಲ್ಲವಾಗುತ್ತದೆ ಎಂದು ಹೇಳಿದರು.
ರಂಗಾಯಣ ಉಪ ನಿರ್ದೇಶಕಿ ನಿರ್ಮಲ ಮಠಪತಿ, ಅನುಭೂತಿ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀವಿದ್ಯಾ ಕಾಮತ್, ಟ್ರಸ್ಟಿ ರೂಪಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net