ಅದಾನಿ ಷೇರುಗಳಲ್ಲಿ ಮತ್ತೆ ಏರಿಕೆ: ಚುನಾವಣೆ ಫಲಿತಾಂಶ ಪೂರ್ವ ಮಟ್ಟಕ್ಕೆ ಚೇತರಿಕೆ

adani-17
Published on

ಮುಂಬೈ: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್ ಮುಂತಾದ ಅದಾನಿ ಗ್ರೂಪ್ ಷೇರುಗಳ ಬೆಲೆ ಗುರುವಾರದ ವಹಿವಾಟಿನಲ್ಲಿ ಶೇ. 8 ರಷ್ಟು ಏರಿಕೆಯಾಗಿದ್ದು, ಚುನಾವಣೆ ಫಲಿತಾಂಶದ ನಂತರ ಈ ಸ್ಟಾಕ್​ಗಳು ಚೇತರಿಸಿಕೊಂಡಿವೆ. ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾದ ಹಿನ್ನೆಲೆಯಲ್ಲಿ ಈ ಷೇರುಗಳು ಹೆಚ್ಚಿನ ಮೌಲ್ಯಮಾಪನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂಬ ಭರವಸೆಯೊಂದಿಗೆ ಈ ಏರಿಕೆ ಕಂಡುಬಂದಿದೆ.

ಈ ಸಮೂಹದ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಷೇರುಗಳ ಬೆಲೆ ಗುರುವಾರದ ವಹಿವಾಟಿನಲ್ಲಿ ಶೇಕಡಾ 2.79 ರಷ್ಟು ಏರಿಕೆ ಕಂಡು 3,204.10 ರೂ. ಮಟ್ಟ ತಲುಪಿತು. ಲೋಕಸಭೆ ಚುನಾವಣೆ ಫಲಿತಾಂಶದ ದಿನದಂದು ಈ ಷೇರು ಬೆಲೆ ಶೇ. 14.70 ರಷ್ಟು ಕಡಿಮೆಯಾಗಿತ್ತು,

ಅದಾನಿ ಪೋರ್ಟ್ಸ್ ಷೇರುಗಳ ಬೆಲೆ ಶೇ. 2.63ರಷ್ಟು ಪ್ರಗತಿ ಸಾಧಿಸಿ 1,390.85 ರೂ.ಗೆ ತಲುಪಿತು. ಚುನಾವಣೆ ಫಲಿತಾಂಶದ ದಿನದಂದು ಈ ಷೇರು ಶೇ. 21.26 ರಷ್ಟು ಕುಸಿದ ನಂತರ ಬುಧವಾರ ಶೇ. 8.58 ರಷ್ಟು ಏರಿಕೆಯಾಗಿತ್ತು.

ಅದಾನಿ ಪವರ್ ಲಿಮಿಟೆಡ್ ಷೇರು ಬೆಲೆ ಕೂಡ ಗುರುವಾರ ಶೇಕಡಾ 6.84 ರಷ್ಟು ಏರಿಕೆ ಕಂಡು ರೂ 775.85 ಕ್ಕೆ ತಲುಪಿದೆ. ಮಂಗಳವಾರದ ವಹಿವಾಟಿನಲ್ಲಿ ಶೇಕಡಾ 17 ರಷ್ಟು ಕುಸಿದ ನಂತರ ಈ ಷೇರು ಬುಧವಾರ ಬಹುತೇಕ ಅದೇ ಬೆಲೆಯಲ್ಲಿ ಮುಂದುವರಿದಿತ್ತು. ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಷೇರು ಬೆಲೆ ಗುರುವಾರ ಶೇ.6.21ರಷ್ಟು ಏರಿಕೆ ಕಂಡು ರೂ.1,011.55ಕ್ಕೆ ತಲುಪಿದೆ. ಈ ಷೇರು ಬುಧವಾರ ಶೇ. 2.58 ಮತ್ತು ಮಂಗಳವಾರ ಶೇ. 20ರಷ್ಟು ಕುಸಿದಿತ್ತು.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಷೇರು ಬೆಲೆ ಶೇ.3.29ರಷ್ಟು ಏರಿಕೆ ಕಂಡು 1,887.70 ರೂ. ಮುಟ್ಟಿತು. ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಷೇರು ಬೆಲೆ ಬುಧವಾರದಂದು ಶೇಕಡಾ 11ರಷ್ಟು ಏರಿಕೆಯಾಗಿತ್ತು. ಗುರುವಾರ ಕೂಡ ಶೇ. 4.94 ರಷ್ಟು ಏರಿಕೆಯಾಗಿ 978.80 ಕ್ಕೆ ತಲುಪಿತು. ಮಂಗಳವಾರದಂದು ಈ ಸ್ಟಾಕ್ ಶೇ. 19.20 ರಷ್ಟು ಕುಸಿದಿತ್ತು. ಸಿಮೆಂಟ್ ಸ್ಟಾಕ್‌ಗಳಾದ ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಕೂಡ ಚುನಾವಣಾ ಫಲಿತಾಂಶ ದಿನದಂದು ಶೇಕಡಾ 15-17 ರಷ್ಟು ಕುಸಿತದ ನಂತರ ಚೇತರಿಸಿಕೊಂಡಿವೆ.

ಜೂನ್ 8 ರಂದು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ವಿಶಾಲವಾದ ಆರ್ಥಿಕ ಕಾರ್ಯಸೂಚಿಯು ಗಮನಾರ್ಹವಾಗಿ ಬದಲಾಗುವ ಸಾಧ್ಯತೆಯಿಲ್ಲ ಎಂದು ಕೋಟಕ್ ಸಂಸ್ಥೆ ಹೇಳಿದೆ. ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು, ಹಣಕಾಸಿನ ಬಲವರ್ಧನೆ ಮತ್ತು ಹೂಡಿಕೆ ನೇತೃತ್ವದ ಬೆಳವಣಿಗೆಯ ಮೇಲೆ ಬಿಜೆಪಿಯ ಗಮನವನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

"ಮೋದಿ ಹೋದರೆ ಅದಾನಿಯೂ ಹೋಗುತ್ತಾರೆ, ಆಪ್ನೆ ಅದಾನಿ ಕೆ ಸ್ಟಾಕ್ಸ್ ದೇಖೆ (ನೀವು ಅದಾನಿ ಷೇರುಗಳನ್ನು ನೋಡಿದ್ದೀರಾ)?" ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮಂಗಳವಾರ ಲೇವಡಿ ಮಾಡಿದ್ದರು. ಆದರೀಗ ರಾಹುಲ್​ ಗಾಂಧಿ ಮಾತಿಗೆ ವ್ಯತಿರಿಕ್ತ ಎನ್ನುವಂತೆ ಸತತ ಎರಡನೇ ದಿನದಂದು ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ಚೇತರಿಕೆ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net