

ನವದೆಹಲಿ: ಆಂತರಿಕ ಗಲಭೆ ಮತ್ತು ರಾಜಕೀಯ ಅನಿಶ್ಚಿತತೆಯಿಂದ ತತ್ತರಿಸಿಹೋಗಿರುವ ಬಾಂಗ್ಲಾದೇಶಕ್ಕೆ ಭಾರತದ ಅದಾನಿ ಗ್ರೂಪ್ ವಿದ್ಯುತ್ ಸಂಬಂಧದ ಬಾಕಿ ಪಾವತಿಗೆ ಒತ್ತಾಯಿಸಿದೆ. ಇಂಧನ ಕೊರತೆ ನೀಗಿಸಲು ಮಾಡಿದ ಸಾಲವು ಉಸ್ತುವಾರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಾರ್ಖಂಡ್‌ನ ಅದಾನಿ ಪವರ್‌ನ ಗೊಡ್ಡಾ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ಸಂಬಂಧ ಅದಾನಿ ಗ್ರೂಪ್‌ಗೆ ಬಾಂಗ್ಲಾ ಸರ್ಕಾರ 4ಸಾವಿರ ಕೋಟಿ ರೂ. ವಿದ್ಯುತ್ ಬಾಕಿ ಉಳಿಸಿಕೊಂಡಿದೆ. ಇದನ್ನು ಕೂಡಲೇ ಪಾವತಿಸಬೇಕು ಎಂದು ಅದಾನಿ ಗ್ರೂಪ್ ಇತ್ತೀಚೆಗೆ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಆದರೆ ಹಂಗಾಮಿ ಸರ್ಕಾರ ಕ್ರಮ ಕೈಗೊಳ್ಳದಿರುವುದರಿಂದ ಈಗ ವಿದ್ಯುತ್ ನಿಲುಗಡೆ ಮತ್ತು ಕೂಡಲೇ ಬಾಕಿ ಪಾವತಿಗೆ ಎಚ್ಚರಿಕೆ ನೀಡಲಾಗಿದೆ.
2017 ರಲ್ಲಿ ಪ್ರಧಾನಿ ಶೇಖ್ ಹಸೀನಾ ಸರ್ಕಾರವಿದ್ದಾಗ ಬಾಂಗ್ಲಾದೇಶದ ವಿದ್ಯುತ್ ಅಭಿವೃದ್ಧಿ ಮಂಡಳಿಯು ಅದಾನಿ ಗ್ರೂಪ್‌ನೊಂದಿಗೆ 25 ವರ್ಷಗಳ ಕಾಲ ವಿದ್ಯುತ್ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಭಾಗವಾಗಿ ಬಾಂಗ್ಲಾದೇಶಕ್ಕೆ 1496 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದು ಕಡ್ಡಾಯ ವಿದ್ಯುತ್ ಬೇಡಿಕೆಯ ಶೇ 10ರಷ್ಟು ಇದೆ ಎಂಬುದು ಗಮನಾರ್ಹ.
2023ರಿಂದ 500 ಮಿಲಿಯನ್ ಡಾಲರ್ ಬಾಕಿ ಬರಬೇಕಿದೆ. ಹೀಗಾಗಿ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಉಸ್ತುವಾರಿ ಸರ್ಕಾರಕ್ಕೆ ಅದಾನಿ ಗ್ರೂಪ್ ಎಚ್ಚರಿಕೆ ರವಾನಿಸಿದೆ.ವಿದ್ಯುತ್ ಸಂಪರ್ಕ ಕಡಿತಗೊಂಡರೆ ದೇಶದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.