ಸಿನಿಮಾ ಎಫೆಕ್ಟ್​! ಮನೆ ಬಾಡಿಗೆ ಕೊಡಲು ಹೋದಾಗ ಮಾಲೀಕನಿಂದ ಅನುಭವಿಸಿದ ಕಹಿ ಘಟನೆ ಬಿಚ್ಚಿಟ್ಟ ಬಾಲಿವುಡ್​ ನಟಿ

Tejashwini
Published on

ಮುಂಬೈ: ಬಾಲಿವುಡ್​ನ ನಟಿ ತೇಜಸ್ವಿನಿ ಪಂಡಿತ್​ ಅವರು ಪುಣೆಯಲ್ಲಿ ತಾನು ತಂಗಿದ್ದ ಅಪಾರ್ಟ್​ಮೆಂಟ್​ನ ಮಾಲೀಕನಿಂದ ಅನುಭವಿಸಿದ ಕಹಿ ಘಟನೆಯ ಬಗ್ಗೆ ಮೊದಲ ಬಾರಿಗೆ ಮಾಧ್ಯಮದ ಎದುರು ಮಾತನಾಡಿದ್ದಾರೆ.

ಸೌಮಿತ್ರಾ ಪೋಟ್​ ನಡೆಸಿಕೊಡುವ ಮಿತ್ರಮ್ಹನೇ ಪಾಡ್​ಕಾಸ್ಟ್​ನಲ್ಲಿ ಲೈಂಗಿಕ ಬಯಕೆ ಈಡೇರಿಸುವಂತೆ ಮಾಲೀಕ ಒಡ್ಡಿದ್ದ ಆಮಿಷದ ಬಗ್ಗೆ ಮಾತನಾಡಿದ್ದಾರೆ. ಅದು 2009-10ರ ಸಮಯ. ನಾನು ಪುಣೆಯ ಸಿನ್ಹಾಗಡ ರಸ್ತೆಯಲ್ಲಿರುವ ಬಾಡಿಗೆ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದೆ. ಆಗ ಕೇವಲ ಎರಡು ಸಿನಿಮಾಗಳು ಮಾತ್ರ ಬಿಡುಗಡೆಯಾಗಿದ್ದವು. ಕಾರ್ಪೊರೇಟರ್​ ಒಬ್ಬರು ಮನೆ ಮಾಲೀಕರಾಗಿದ್ದರು. ನಾನು ಬಾಡಿಗೆ ಪಾವತಿಸಲು ಅವರ ಕಚೇರಿಗೆ ತೆರಳಿದಾಗ ನೇರವಾಗಿಯೇ ಲೈಂಗಿಕ ಬಯಕೆ ತೀರಿಸುವಂತೆ ಕೇಳಿದ್ದರು. ನನಗೆ ಅತೀವ ಕೋಪ ಬಂದಿತು. ಟೇಬಲ್​ ಮೇಲೆ ನೀರು ತುಂಬಿಟ್ಟಿದ್ದ ಗ್ಲಾಸ್​ ತೆಗೆದುಕೊಂಡು ಆತನ ಮುಖಕ್ಕೆ ಎರಚಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ತೇಜಸ್ವಿನಿ, ಇಂತಹ ಕೆಲಸ ಮಾಡುವುದಕ್ಕೆ ನಾನು ಈ ವೃತ್ತಿಗೆ ಬಂದಿಲ್ಲ ಅಥವಾ ಅಂತಹ ಕೆಲಸ ಮಾಡಿದ್ದರೆ ನಾನು ಬಾಡಿಗೆ ಅಪಾರ್ಟ್​ಮೆಂಟ್​ನಲ್ಲಿ ಉಳಿಯುತ್ತಿರಲಿಲ್ಲ. ಬದಲಾಗಿ ನಾನು ಮನೆಗಳು ಮತ್ತು ಕಾರುಗಳನ್ನು ಖರೀದಿಸುತ್ತಿದ್ದೆ. ನನ್ನ ವೃತ್ತಿಯ ಕಾರಣದಿಂದ ಮತ್ತು ನನ್ನ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದರಿಂದ ಅಪಾರ್ಟ್​ಮೆಂಟ್​ ಮಾಲೀಕ ನನ್ನನ್ನು ಆ ದೃಷ್ಟಿಕೋನದಿಂದ ನಿರ್ಣಯಿಸಿದರು. ಇದು ಜೀವನದಲ್ಲಿ ನನಗೊಂದು ಪಾಠವಾಗಿದೆ ಎಂದು ತಿಳಿಸಿದ್ದಾರೆ.

2004ರಲ್ಲಿ ಕೇದಾರ್ ಶಿಂಧೆಯವರ ಅಗಾ ಬಾಯಿ ಅರೇಚಾ ಸಿನಿಮಾದಿಂದ ಚೊಚ್ಚಲ ಪ್ರವೇಶ ಮಾಡಿದ ತೇಜಸ್ವಿನಿ, ನಟಿ ಜ್ಯೋತಿ ಚಾಂಡೇಕರ್ ಅವರ ಮಗಳು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net