

ಮುಂಬೈ: ( shefali jariwala) ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ‘ಹುಡುಗರು’ ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಅವರು 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮುಂಬೈನ ಅಂಧೇರಿ ಲೋಖಂಡ್ವಾಲಾ ಪ್ರದೇಶದಲ್ಲಿ ವಾಸಿಸುವ ನಟಿ ಶೆಫಾಲಿ ಶುಕ್ರವಾರ ಅನಾರೋಗ್ಯಕ್ಕೆ ಒಳಗಾದರು. ಎದೆಯಲ್ಲಿ ನೋವು ಕಾಣಿಸಿಕೊಂಡ ನಂತರ ಅವರ ಪತಿ ಪರಾಗ್ ತ್ಯಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಶೆಫಾಲಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ದೇಹವನ್ನು ಈಗ ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಶೆಫಾಲಿ ಸಾವಿನ ಸುದ್ದಿಯಿಂದ ಚಿತ್ರರಂಗದ ಗಣ್ಯರು ಆಘಾತಕ್ಕೊಳಗಾಗಿದ್ದಾರೆ. ಅವರ ನಿಧನಕ್ಕೆ ಅವರು ಸಂತಾಪ ಸೂಚಿಸುತ್ತಿದ್ದಾರೆ.
ಶೆಫಾಲಿ ಜನಿಸಿದ್ದು 1982ರ ಡಿಸೆಂಬರ್ 15ರಂದು. ಅವರು ಮುಂಬೈನಲ್ಲಿ ಹುಟ್ಟಿ, ಬೆಳೆದರು. 2004ರಲ್ಲಿ ಅವರು ಹರ್ಮೀತ್ ಸಿಂಗ್ನ ವಿವಾಹ ಆದರು. ಈ ಸಂಬಂಧ 2009ರವರೆಗೆ ಇತ್ತು. ಆ ಬಳಿಕ ಇವರು ವಿಚ್ಛೇದನ ಪಡೆದರು. 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ವಿವಾಹ ಆದರು. ಎರಡನೇ ಪತಿಯ ಜೊತೆ ಸಂಸಾರ ನಡೆಸುತ್ತಿದ್ದರು.
ಹುಡುಗರು ಎಂಬ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡರು. ಬಹಳ ಕಡಿಮೆ ಅವಧಿಯಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್ ಗಳಿಸಿದ ಶೆಫಾಲಿ, 2002 ರಲ್ಲಿ ಆಶಾ ಪರೇಖ್ ಚಿತ್ರದ "ಕಾಂತ ಲಗಾ" ಹಾಡಿನ ಮೂಲಕ ಪ್ರಸಿದ್ಧರಾದರು. ಈ ಹಾಡನ್ನು "ಮುಜ್ಸೆ ಶಾದಿ ಕರೋಗಿ" ಚಿತ್ರದಲ್ಲಿ ಬಳಸಲಾಗಿತ್ತು. ಈಗಲೂ ಈ ಹಾಡು ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಶೆಫಾಲಿ ಬಿಗ್ ಬಾಸ್ ಸೀಸನ್ 13 ರಲ್ಲಿಯೂ ಭಾಗವಹಿಸಿದ್ದರು. "ಮುಜ್ಸೆ ಶಾದಿ ಕರೋಗಿ" ಚಿತ್ರದ ನಂತರ ಅವರು ಹಿಂದಿಯಲ್ಲಿ ಮತ್ತೊಂದು ಚಿತ್ರ ಮಾಡಿಲ್ಲ.