ಬಾದ್​ಷಾ ಹಾಡಿನಲ್ಲಿ ರಶ್ಮಿಕಾ; ಯಶ್ ರಾಜ್ ಫಿಲಂಸ್ ನಿರ್ಮಾಣದ ಆಲ್ಬಂ

Ullasa Lead
Published on

ಬೆಂಗಳೂರು:  ದಕ್ಷಿಣ ಭಾರತದಲ್ಲಿ ಸೆನ್ಸೇಷನ್​ ಸೃಷ್ಟಿಸಿರುವ ನ್ಯಾಷನಲ್ ಕ್ರಷ್ ಎಂದೇ ಕರೆಸಿಕೊಳ್ಳುವ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್​ನತ್ತ ಮುಖ ಮಾಡಿದ್ದಾರೆ. ಹಾಗೆಂದ ಮಾತ್ರಕ್ಕೆ ಬಾಲಿವುಡ್ ಸಿನಿಮಾ ಒಪ್ಪಿಕೊಂಡರು ಎಂದಲ್ಲ. ಬದಲಿಗೆ ಬಾಲಿವುಡ್​ನ ಟಾಪ್ ರ‍್ಯಾಪರ್​ ಬಾದ್​ಷಾ ಅವರ ಹಾಡಿನಲ್ಲಿ ರಶ್ಮಿಕಾ ಹೆಜ್ಜೆ ಹಾಕುತ್ತಿದ್ದಾರೆ. ಇಲ್ಲಿಯವರೆಗೂ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರಶ್ಮಿಕಾ ಮೊದಲ ಬಾರಿಗೆ ಮ್ಯೂಸಿಕ್ ಜಗತ್ತಿಗೆ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿಯೂ ಸಾಕಷ್ಟು ನಟಿಯರು ಮ್ಯೂಸಿಕ್ ವಿಡಿಯೋಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಒಂದಷ್ಟು ಹಾಡುಗಳ ಶೂಟಿಂಗ್ ಪ್ರಕ್ರಿಯೆಯೂ ಈಗಾಗಲೇ ಶುರುವಾಗಿದೆ. ಆದರೆ, ಇಲ್ಲಿಯವರೆಗೂ ಕನ್ನಡದ ನಟಿಯೊಬ್ಬರು ರ‍್ಯಾಪರ್​ ಬಾದ್​ಷಾ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿರಲಿಲ್ಲ. ಇದೀಗ ಆ ಚಾನ್ಸ್ ರಶ್ಮಿಕಾಗೆ ಸಿಕ್ಕಿದೆ.

ಗ್ಲಾಮರ್ ಅವತಾರದಲ್ಲಿಯೇ ರಶ್ಮಿಕಾ ಈ ಹಾಡಿನಲ್ಲಿ ಎದುರಾಗಲಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ, ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಹಾಡಿಗೆ ಬಾಲಿವುಡ್​ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಬಂಡವಾಳ ಹೂಡುತ್ತಿದೆ. ಚಂಡೀಗಢದಲ್ಲಿ ಹಾಡಿನ ಸಲುವಾಗಿಯೇ ಬೃಹತ್ ಸೆಟ್ ಹಾಕಲಾಗಿದ್ದು, ರಶ್ಮಿಕಾ ಸಹ ಪಾಲ್ಗೊಂಡು ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ರ‍್ಯಾಪರ್​ ಬಾದ್​ಷಾ ಈಗಾಗಲೇ ಬಾಲಿವುಡ್​ನ ಆಲಿಯಾ ಭಟ್, ಸೋನಮ್ ಕಪೂರ್, ಜಾಕ್​ಲೀನ್ ಫರ್ನಾಂಡೀಸ್, ನೋರಾ ಫತೇಹಿ, ವರುಣ್ ಧವನ್ ಸೇರಿ ಹಲವು ಸ್ಟಾರ್​ಗಳ ಜತೆಗೆ ಕೆಲಸ ಮಾಡಿದ್ದಾರೆ. ಇದೀಗ ಇದೇ ಬಾದ್​ಷಾ ಜತೆಗೆ ಮೊದಲ ಬಾರಿ ದಕ್ಷಿಣದ ನಟಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದಾರೆ. ಅವರ ಜತೆಗೆ ಯುವನ್, ಅಮಿತ್ ಉಚಾನಾ ಸಹ ಇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net