

ಮುಂಬೈ: ‘ಅಣ್ಣಯ್ಯ’ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದ 90ರ ದಶಕದ ನಟಿ ಮಧು(Actress Madhoo) ಅವರ ಕುರಿತು ಪರಿಚಯಿಸುವ ಅಗತ್ಯವಿಲ್ಲ. ಕೆಲವು ಸಮಯ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ 2008ರಲ್ಲಿ ಹಿಂದಿಯ ‘ಕಭಿ ಸೋಚಾ ಭಿ ನಾ ಥಾ’ ಚಿತ್ರದೊಂದಿಗೆ ಮತ್ತೆ ಚಿತ್ರರಂಗಕ್ಕೆ ಮರಳಿದರು. ಅಂದಿನಿಂದ ಮತ್ತೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಣ್ಣದ ಲೋಕಕ್ಕೆ ಕಮ್ಬ್ಯಾಕ್ ಮಾಡಿದ ಕುರಿತು ನಟಿ ಮಧು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಮಧು, ವೇತನ ಸಮಾನತೆ ಮತ್ತು ಮಹಿಳಾ ಸುರಕ್ಷತೆಯಂತಹ ನಿರ್ಣಾಯಕ ವಿಷಯಗಳು ವ್ಯಾಪಕ ಗಮನ ಸೆಳೆಯುತ್ತಿರುವ ಸಮಯದಲ್ಲಿ ಚಿತ್ರರಂಗಕ್ಕೆ ಮರಳಿದ್ದು ಸಂತೋಷವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ತಾವು ನಾಯಕಿ ನಟಿಯಾಗಿ ನಟಿಸುತ್ತಿದ್ದ 90ರ ದಶಕದಲ್ಲಿ ಮಹಿಳೆಯರಿಗೆ ರಕ್ಷಣೆ, ಸುರಕ್ಷತೆ ಮತ್ತು ವೇತನ ಸಮಾನತೆಯ ಬಗ್ಗೆ ಚರ್ಚಿಸಲು ಅವಕಾಶ ಇರಲಿಲ್ಲ. ಈ ಕುರಿತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಆಗ ವಿಷಯಗಳು ಹೇಗಿದ್ದವು ಎಂದರೆ ಕುರುಡು ಸ್ವೀಕಾರವಿತ್ತು ಜತೆಗೆ ಅಂದಿನ ಮನಸ್ಥಿತಿಯು ಹಾಗಿತ್ತು. ಆದರೆ ಈಗ ಅದು ಹಾಗಲ್ಲ. ವೇತನ, ಮಹಿಳಾ ಸುರಕ್ಷತೆ, ಸರಿ ಅನ್ನಿಸದ ವಿಷಯಗಳ ಕುರಿತು ಮಾತನಾಡಬಹುದು ಮತ್ತು ಹೋರಾಟ ಮಾಡಬಹುದು. ಕೆಲವೊಮ್ಮೆ ಗೆಲ್ಲುತ್ತೀರಿ ಮತ್ತೆ ಕೆಲವೊಮ್ಮೆ ನೀವು ಗೆಲ್ಲುವುದಿಲ್ಲ ಎಂದು ತಿಳಿಸಿದರು.
ನಾನು ಬಹಳಷ್ಟು ಆಕಾಂಕ್ಷೆಗಳೊಂದಿಗೆ ಸಿನಿಮಾಕ್ಕೆ ಹಿಂತಿರುಗಿದ್ದೇನೆ. ಹಾಗಾಗಿ ನಾನು ಮಾಡಲು ಸಾಧ್ಯವಾಗದ್ದನ್ನು ಅದನ್ನು ಸರಿದೂಗಿಸಲು ಹಿಂತಿರುಗಿದ್ದೇನೆ. ನನಗೆ ಆ ಅವಕಾಶಗಳು ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಇದರಿಂದ ನಾನು ಬಂದು ನನ್ನ ಉಳಿದ ಕನಸುಗಳನ್ನು ನನಸಾಗಿಸಿಕೊಳ್ಳಬಹುದು. ಮೊದಲು ನನ್ನನ್ನು ನಾಯಕಿ ಎಂದು ಕರೆಯಲಾಗುತ್ತಿತ್ತು, ಈಗ ನಾನು ನಟಿಸಲು ಬಯಸುತ್ತೇನೆ. ನನಗೆ ಸ್ವಾಭಾವಿಕವಾಗಿ ಬರುವ ಮತ್ತು ನನಗೆ ಸ್ವಾಭಾವಿಕವಾಗಿ ಬರದ ಪಾತ್ರಗಳನ್ನು ನಾನು ನಿರ್ವಹಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ನಟಿ ಮಧು ಅವರು ವಿಷ್ಣು ಮಂಚು ಅವರ ಬಹುನಿರೀಕ್ಷಿತ ಸಿನಿಮಾ ಕಣ್ಣಪ್ಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ ಲಾಲ್ ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಏಪ್ರಿಲ್ 25 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.(ಏಜೆನ್ಸೀಸ್)